ತುಮಕೂರು :
ತುಮಕೂರು ತಾಲ್ಲೂಕಿನಾದ್ಯಂತ ಹೆಚ್ಚಿನದಾಗಿ ಗ್ರಾಮೀಣ ಭಾಗದಲ್ಲಿ ಚಿರತೆ ದಾಳಿ ನಡೆಯುತ್ತಿದ್ದು, ಒಂಟಿಮನೆಯಲ್ಲಿರುವ ಕುಟುಂಬಗಳು ಎಚ್ಚರಿಕೆಯಿಂದ ಇರಬೇಕು ಎಂದು ತಾಲ್ಲೂಕಿನ ತಹಶೀಲ್ದಾರ್ ಮೋಹನ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಗರದ ತಾಲ್ಲೂಕು ತಹಶೀಲ್ದಾರ್ ಕಛೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು, ವೃದ್ದರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಒಂಟಿಯಾಗಿ ಓಡಾಡಬಾರದು. ಸಂಜೆ 6 ಗಂಟೆಯೊಳಗೆ ಮನೆಯನ್ನು ಸೇರಬೇಕು ಎಂದು ಮನವಿ ಮಾಡಿದರು.
ಚಿರತೆಯು ಕಂಡಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಗದ್ದಲ ಮಾಡದೇ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ದನಗಳನ್ನು ಮೇಯಿಸಲು ಹೊಲಕ್ಕೆ ಹೋದಾಗ ಬಯಲು ಪ್ರದೇಶದಲ್ಲಿ ಕುಳಿತುಕೊಳ್ಳಬೇಕು. ಪೊದೆಗಳ ಬಳಿ ಒಂಟಿಯಾಗಿ ಕೂರಬಾರದು. ಸಂಜೆ 6 ಗಂಟೆಯ ನಂತರ ಎಲ್ಲಾ ಸಾಕು ಪ್ರಾಣಿಗಳನ್ನು ಮನೆಯ ಹಾಗೂ ಕೊಟ್ಟಿಗೆಯ ಒಳಗೆ ಸುರಕ್ಷಿತವಾಗಿರುವಂತೆ ನಿಗಾವಹಿಸಬೇಕು. ಸಾಕುಪ್ರಾಣಿಗಳನ್ನು ಚಿರತೆ ಹತ್ಯೆ ಮಾಡಿದ್ದರೆ ಅದನ್ನು ಮುಟ್ಟದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಚಿರತೆ ಹಾಗೂ ಇನ್ನಿತರೆ ಕಾಡುಪ್ರಾಣಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಕೂಡಲೇ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ರಾಮಲೆಕ್ಕಾಧಿಕಾರಿಗಳಿಗೆ, ರಾಜಸ್ವ ನಿರೀಕ್ಷಕರಿಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ತುಮಕೂರು ವಲಯ ಅರಣ್ಯಾಧಿಕಾರಿ ನಟರಾಜ್ ಮಾತನಾಡಿ, ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈವರೆಗೆ ಚಿರತೆ ದಾಳಿಯಿಂದ ಒಟ್ಟು 4 ಮಂದಿ ಮೃತಪಟ್ಟಿದ್ದಾರೆ. ಗೂಳೂರು, ಹೆಬ್ಬೂರು, ಕೋರಾ ಪ್ರದೇಶದಲ್ಲಿ ಹೆಚ್ಚಿನದಾಗಿ ಚಿರತೆಗಳು ಇರುವುದು ಕಂಡುಬಂದಿದೆ. ಬನ್ನಿಕುಪ್ಪೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 18 ಬೋನ್‍ಗಳನ್ನು ಇಡಲಾಗಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜಯಪಾಲ್, ಆರ್.ಡಿ.ಪಿ.ಆರ್. ಎ.ಒ.ಶಿವಣ್ಣ, ಸರ್ಕಲ್ ಇನ್ಸ್‍ಪೆಕ್ಟರ್ ಸೇರಿದಂತೆ ಮತ್ತಿತರರು ಇದ್ದರು.
ಪೊದೆ ತೆರವುಗೊಳಿಸಿ : ರೈತರು ತಮ್ಮ ಜಮೀನನಲ್ಲಿ ಪೊದೆ ಬೆಳೆಸಿ ಚಿರತೆಗಳಿಗೆ ಅವಾಸ ಸ್ಥಾನ ಮಾಡಿಕೊಡದೆ ಕೂಡಲೇ ತರವುಗೊಳಿಸಬೇಕು. ಒಂದು ವೇಳೆ ತರವುಗೊಳಿಸದೇ ಇದ್ದಲ್ಲಿ ಜಮೀನಿಗೆ ಸಂಬಂಧಿಸಿದ ಪಹಣಿ ಕಲಂ 11(ಋಣ)ರಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಎಂದು ದಾಖಲಿಸಲಾಗುವುದು ಎಂದು ಎಚ್ಚರಿಸಿದ ಅವರು, ಸರ್ಕಾರಿ ಜಮೀನುಗಳಲ್ಲಿ ಈಗಾಗಲೇ ಪೊದೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಣ್ಣ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಪೊದೆ ತೆರವುಗೊಳಿಸಲಾಗಿದೆ ಎಂದರು.
ಚಿರತೆ ಸುಳಿವು ಸಿಕ್ಕರೆ ತಹಶೀಲ್ದಾರ್ ಕಛೇರಿ ದೂ.ಸಂ.0816-2278496, ಪೊಲೀಸ್ ಠಾಣೆ ದೂ.ಸಂ.8217372763, ಅರಣ್ಯ ಇಲಾಖೆಯ ಕಂಟ್ರೋಲ್ ರೂಂ ದೂ.ಸಂ.7829689854/9845801411/9980859719/9611202826ಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು.