ತುಮಕೂರು:
ಮಾರಣಾಂತಿಕ ಕೊರೋನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಎಚ್ಚರವಹಿಸಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಕೊರೋನಾ ವೈರಸ್ ಪ್ರಕರಣ ಹರಡದಂತೆ ತಡೆಗಟ್ಟಲು ಮುಂಜಾಗ್ರತೆ ವಹಿಸುವ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೊರೋನಾ ವೈರಸ್‍ನಿಂದಾಗಿ ಚೀನಾ ದೇಶ ತತ್ತರಿಸುತ್ತಿದ್ದು, ವಿದೇಶಗಳಲ್ಲಿದ್ದ ಭಾರತೀಯರು ದೇಶಕ್ಕೆ ಮರಳಿದ್ದಾರೆ. ಈ ಪೈಕಿ ತೆಲಗಾಂಣ ರಾಜ್ಯದಲ್ಲಿ ಸೋಂಕು ಪತ್ತೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಆರೋಗ್ಯ ಇಲಾಖೆಯು ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕವಾಗಿ 5 ಹಾಸಿಗೆಗಳುಳ್ಳ ವಿಶೇಷ ವಾರ್ಡ್ ತೆರೆದು, ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ತಾಲ್ಲೂಕ್ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡಲೇ ಪ್ರತ್ಯೇಕ ವಾರ್ಡ್‍ಗಳನ್ನು ಮಾಡಬೇಕು ಎಂದರಲ್ಲದೇ ವಿದೇಶದಿಂದ ಬರುವ ಜನರಿಗೆ ಏರ್‍ಪೋರ್ಟ್‍ಗಳಲ್ಲಿ ವಿಳಾಸ ಹೊಂದಿರುವ ಅರ್ಜಿ ನಮೂನೆ ನೀಡಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಆ ಮಾಹಿತಿ ಸಂಬಂಧಿಸಿದ ಜಿಲ್ಲೆಗೆ ತಿಳಿಸಲಾಗುತ್ತಿದೆ. ಆದ್ದರಿಂದ ಕೊರೋನಾ ವೈರಸ್‍ನ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೊರೋನಾ ವೈರಸ್ ಸೊಂಕು ಕಂಡು ಬಂದರೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿ, ಮಾಸ್ಕ್‍ಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಸರ್ಕಾರಿ-ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಿಡಿಪಿಐ ಅವರಿಗೆ ಸೂಚಿಸಿದರು. ವಿದೇಶದಿಂದ ಬಂದವರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಎಚ್ಚರವಹಿಸಬೇಕು ಎಂದರಲ್ಲದೇ ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ:- ಜನಸಂದಣಿಯಿರುವ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಸಂತೆ, ಮಾರುಕಟ್ಟೆಗಳಲ್ಲಿ ಕೊರೋನಾ ವೈರಸ್ ಬಗ್ಗೆ ಪೋಸ್ಟರ್‍ಗಳನ್ನು ಅಂಟಿಸಿ ಜಾಗೃತಿ ಮೂಡಿಸಬೇಕು.
ತರಬೇತಿ ನೀಡಿ:- ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿರುವ ಸಿಬ್ಬಂದಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಬೇಕು. ಅಲ್ಲದೇ ಬಸ್ ಪ್ರಯಾಣಿಕರಿಗೆ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲು ಬಸ್ ಕಂಡಕ್ಟರ್‍ಗಳಿಗೂ ತರಬೇತಿ ನೀಡಬೇಕು ಎಂದು ಸೂಚಿಸಿದರು.
ಸರ್ಕಾರಿ ಅಧಿಕಾರಿಗಳಿಗೆ ರಜೆ ರದ್ದು:-
ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳುವ ಆಗಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಾತ್ರೆಯಲ್ಲೂ ಜಾಗೃತಿ:- ಈಗಾಗಲೇ ಎಲ್ಲೆಡೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗಿದ್ದು, ಜಾತ್ರೆಗೆ/ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಆದ್ದರಿಂದ ಜಾತ್ರೆಯ ಸಂಯೋಜಕರೊಂದಿಗೆ ಚರ್ಚಿಸಿ ಜಾತ್ರೆಗೆ ಬರುವ ಜನರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು. ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಜಾತ್ರೆಗೆ ಹೋಗದಂತೆ ಮನೆಯಲ್ಲಿಯೇ ಇರುವುದು ಒಳಿತು ಎಂದರು.
ಸಹಾಯವಾಣಿ:-
ಕೊರೋನಾ ವೈರಸ್ ಮಾಹಿತಿಗಾಗಿ ಜಿಲ್ಲಾಸ್ಪತ್ರೆ 0816-2252935 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ವದಂತಿಗಳಿಗೆ ಕಿವಿಗೊಡಬೇಡಿ:- ಜಿಲ್ಲೆಯ 13ಜನರು ವಿದೇಶಗಳಿಂದ ಬಂದಿದ್ದು ಯಾರಿಗೂ ಕೊರೋನಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ಕೈಕಾಲುಗಳನ್ನು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮು-ಶೀತ ಇರುವವರು ಮಾಸ್ಕ್‍ಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆವಹಿಸಲು ರಚನೆಯಾಗಿರುವ ಜಿಲ್ಲಾ ಮಟ್ಟದ ಸಮಿತಿಯಂತೆ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ/ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಪ್ರತಿನಿತ್ಯ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿ ಎಂದ ಅವರು, ಪ್ರತಿನಿತ್ಯ ಜಿಲ್ಲಾಡಳಿತಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಡಿಹೆಚ್‍ಓಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಹೆಚ್‍ಓ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.