ತುಮಕೂರು :
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದ 4 ಇಲಾಖೆ/ ಏಜೆನ್ಸಿಗಳಿಗೆ 1ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್ ತಿಳಿಸಿದ್ದಾರೆ.
ಅಗೆದಿರುವ ರಸ್ತೆಗಳನ್ನು ಪುನರ್‍ಸ್ಥಾಪಿಸದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ(ಕೆಯುಡಬ್ಲ್ಯುಎಸ್ ಅಂಡ್ ಡಿಬಿ) 60ಲಕ್ಷ ರೂ., ಬೆಸ್ಕಾಂ ಸಂಸ್ಥೆಗೆ 10 ಲಕ್ಷ ರೂ., ಮೆಘಾ ಗ್ಯಾಸ್ ಕಂಪನಿಗೆ 20ಲಕ್ಷ ರೂ. ಹಾಗೂ ರಿಲೆಯನ್ಸ್ ಜಿಯೋ ಕಂಪನಿಗೆ 10ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ.
ವಿವಿಧ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ಪುನರ್‍ಸ್ಥಾಪನೆ(Restoration) ಮಾಡದೆ ಇರುವುದರಿಂದ ನಗರದಲ್ಲಿ ಧೂಳು ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಕಾಮಗಾರಿಯ ಪುನರ್ ಸ್ಥಾಪನೆಯನ್ನು ತುರ್ತಾಗಿ ಯಥಾಸ್ಥಿತಿಯಲ್ಲಿ ನಿರ್ವಹಣೆ ಮಾಡಲು ಸಂಬಂಧಿಸಿದ ಇಲಾಖೆ/ ಏಜೆನ್ಸಿಗಳಿಗೆ ಹಲವಾರು ಬಾರಿ ಸೂಚಿಸಲಾಗಿದ್ದರೂ ಈವರೆಗೂ ಕ್ರಮ ಕೈಗೊಳ್ಳದೇ ಇರುವುದರಿಂದ ಈ ದಂಡವನ್ನು ವಿಧಿಸಲಾಗಿದೆ.
ಅಗೆದಿರುವ ರಸ್ತೆಗಳ ಪುನರ್‍ಸ್ಥಾಪನೆಯನ್ನು ಕನಿಷ್ಠಾವಧಿಯಲ್ಲಿ ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸದರಿ ಇಲಾಖೆ/ಏಜೆನ್ಸಿಗಳಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.