ತುಮಕೂರು:
ಬೆಂಗಳೂರು ನಗರದಲ್ಲಿ 4 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ತುಮಕೂರು ನಗರವು ಬೆಂಗಳೂರಿಗೆ ಸಮೀಪವಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಕೊರೋನಾ ವೈರಸ್ ನಿಯಂತ್ರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿದೇಶದಿಂದ ಬರುವ ಜಿಲ್ಲೆಯ ಜನರನ್ನು ಪರೀಕ್ಷಿಸಿ, ಕೊರೋನಾ ವೈರಸ್ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು 14 ದಿನಗಳಿಂದ 28 ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೈಧ್ಯರು ಹಾಗೂ ವೈಧ್ಯಕೀಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ಕುರಿತು ಒಂದು ಸುತ್ತು ತರಬೇತಿ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆಯ ವೈಧ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು, ಈ ವೈಧ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಡಿಹೆಚ್‍ಓ ತಿಳಿಸಿದರು.
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೈಗಳನ್ನು ಸೋಪಲ್ಲಿ ತೊಳೆದುಕೊಳ್ಳುವಂತೆ ಎಲ್ಲಾ ಶಾಲೆಯ ಮಕ್ಕಳಿಗೆ ಅರಿವು ಮೂಡಿಸಬೇಕು ಶಾಲೆಯಲ್ಲಿ ಕೈತೊಳೆದುಕೊಳ್ಳುವ ಸೋಪನ್ನು ಕಡ್ಡಾಯವಾಗಿ ಇಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೋನಾ ವೈರಸ್ ಇರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳ ಮಾದರಿಯನ್ನು ಸಂಗ್ರಹಿಸಿ ಹಾಸನ, ಬೆಂಗಳೂರು ಹಾಗೂ ಮೈಸೂರು ವೈಧ್ಯಕೀಯ ಕಾಲೇಜುಗಳಲ್ಲಿನ ಪ್ರಯೋಗಾಲಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳುವ ಆಗಿಲ್ಲ ಹಾಗೂ ದಿನದ 24 ಗಂಟೆಯೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈಧ್ಯರು ಹಾಗೂ ವೈಧ್ಯಕೀಯ ಸಿಬ್ಬಂದಿಗಳ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು ಎಂದರು.
ಕರೋನಾ ವೈರಸ್ ನಿಯಂತ್ರಣದ ಬಗ್ಗೆ ಜಿಲ್ಲೆಯ ಜನರಿಗೆ ವ್ಯಾಪಕ ಅರಿವು ಮೂಡಿಸಬೇಕು. ಅದಕ್ಕಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಡಿಹೆಚ್‍ಓ ಡಾ||ಬಿ.ಆರ್.ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ||ವೀರಭದ್ರಯ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.