ತುಮಕೂರು :
ಮುಜರಾಯಿ ಇಲಾಖೆಯ ಸಪ್ತಪದಿ-ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಮಾರ್ಚ್ 15ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಪ್ತಪದಿ ವಿಚಾರ ಸಂಕಿರಣದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮತನಾಡಿದ ಅವರು, ಜಿಲ್ಲೆಯಲ್ಲಿ ಆಯ್ಕೆಯಾಗಿರುವ ದೇವಾಲಯಗಳಲ್ಲಿ ಎಪ್ರಿಲ್ 26 ರಂದು ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ಮುಜರಾಯಿ ಸಚಿವರು ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು ಹಾಗೂ ಎಲ್ಲಾ ಶಾಸಕರನ್ನು ವಿಚಾರ ಸಂಕಿರಣಕ್ಕೆ ಆಹ್ವಾನಿಸಬೇಕು. ಈ ಕಾರ್ಯಕ್ರಮದಲ್ಲಿ ಸಪ್ತಪದಿ ಸಾಮೂಹಿಕ ವಿವಾಹದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀಶಕ್ತಿ ಸಂಘಗಳು, ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರಮುಖವಾಗಿ ಗ್ರಾ.ಪಂ. ಮಹಿಳಾ ಅಧ್ಯಕ್ಷರುಗಳನ್ನು ವಿಚಾರ ಸಂಕಿರಣದಲ್ಲಿ ಕರೆ ತರುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ವಿಚಾರ ಸಂಕಿರಣದಲ್ಲಿ ಸಪ್ತಪದಿ ವಿವಾಹದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸುವುದು ಹಾಗೂ ಆನಂದ ಮಹರ್ಷಿ ಗುರೂಜಿಯನ್ನು ಆಹ್ವಾನಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಿಚಾರ ಸಂಕಿರಣ ನಡೆಯುವ ಸ್ಥಳದಲ್ಲಿ 3 ಕೌಂಟರ್‍ಗಳನ್ನು ಪ್ರತ್ಯೇಕವಾಗಿ ತೆರೆದು ಅರ್ಜಿಗಳನ್ನು ಸ್ಥಳದಲ್ಲೇ ವಿತರಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.