ತುಮಕೂರು :
ತುಮಕೂರು ಜಿಲ್ಲೆಯಲ್ಲಿ ಸುಮಾರು 563 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು ಎಂದು ಗುರುತಿಸಲಾಗಿದ್ದು, ತೀವ್ರವಾಗಿ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಸಮಸ್ಯೆ ಕಂಡುಬರುವ ಮೊದಲೇ ಅಧಿಕಾರಿಗಳು ಆ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮೂಲ ಇರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು, ಖಾಸಗಿ ವ್ಯಕ್ತಿಗಳ ಬೋರ್‍ವೆಲ್‍ಗಳಿಂದಲೂ ನೀರು ಪಡೆಯುವ ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಸಹ ಬಳಸಿಕೊಂಡು ತೀವ್ರವಾಗಿ ನೀರಿನ ಸಮಸ್ಯೆ ಕಂಡಿರುವ ತುಮಕೂರು, ಕುಣಿಗಲ್ ತಾಲ್ಲೂಕುಗಳ ಗ್ರಾಮಗಳಿಗೆ ಸಿ.ಆರ್. ಫಂಡ್‍ನಿಂದ ಹಣ ಬಳಸಿಕೊಂಡು ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕುಡಿಯುವ ನೀರು ಸರಬರಾಜು ಬಗ್ಗೆ ಸಭೆಗಳು ನಡೆಯುತ್ತಿದ್ದು, ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಸ್ಕಾಂನವರು ಕುಡಿಯುವ ನೀರಿಗಾಗಿ ಕೊರೆಯಿಸುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸಹಾಯವಾಣಿ ದೂರವಾಣಿ ಸೌಲಭ್ಯ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ದೂರವಾಣಿ ಮೂಲಕ ಕುಡಿಯುವ ನೀರಿನ ಅಭಾವದ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿಸಬಹುದಾಗಿದೆ.
ಇದರ ಬಗ್ಗೆ ದೂರುಗಳ ಪುಸ್ತಕವನ್ನು ಇಡಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕಿನ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಆರ್. ಚಂದ್ರಿಕಾ ಅವರು ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕು ಎಲ್ಲಿಯೂ ಕಂಡುಬಂದಿರುವುದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2 ಬಾರಿ ತರಬೇತಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕರೋನ ಸೋಂಕಿನಿಂದ ಮಕ್ಕಳು ಭಾಧಿತರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಾಲೆ ಮತ್ತು ಅಂಗನವಾಡಿ ಬಿಟ್ಟ ಮೇಲೆ ಮನೆಗೆ ಸುರಕ್ಷಿತವಾಗಿ ತಲುಪುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚಿರತೆ, ಕರೋನ ಸೋಂಕಿನ ಬಗ್ಗೆ ಸಹ ನಿರಂತರ ನಿಗಾ ವಹಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಆರ್. ಕಾಮಾಕ್ಷಮ್ಮ ಸಭೆಗೆ ಮಾಹಿತಿ ನೀಡಿದರು.
ವಿದ್ಯಾರ್ಥಿನಿಲಯಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿರುವುದರಿಂದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿಯಮಿತವಾಗಿ ಹಾಜರಿರುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ. ಹಾಗೂ ನೀರಿನ ಅಭಾವವಿರುವ ವಿದ್ಯಾರ್ಥಿನಿಲಯಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಪ್ರಸಕ್ತ ಹಣಕಾಸಿನ ವರ್ಷಕ್ಕಾಗಿ ಇಲಾಖೆಗಳಿಗೆ ಬಂದಿರುವ ಅನುದಾನವನ್ನು ಲ್ಯಾಪ್ಸ್ ಆಗದಂತೆ ಬಳಸಿಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿಯ ಅಧ್ಯಕ್ಷೆ ಅಕ್ಕಮಹಾದೇವಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನವ್ಯಬಾಬು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.