ತುಮಕೂರು:
ಜಿಲ್ಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಸಾರ್ವಜನಿಕರಿಗೆ ತಿಳಿದಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ-0816-2278387/2251414ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ ಸೂಚನೆ ನೀಡಿದ್ದಾರೆ.
ತಾಲ್ಲೂಕು ಮಟ್ಟದಲ್ಲಿ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲೂ ಕರೋನ ಸೋಂಕು ಹರಡುವ ಬಗ್ಗೆ ಜನಜಾಗೃತಿ ಮೂಡಿಸಿ ಮುಂಜಾಗ್ರತಾ ಕ್ರಮವಾಗಿ ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಬಾಯಿ, ಕಣ್ಣು, ಮೂಗು ಇವುಗಳನ್ನು ಮುಟ್ಟದೇ ಇರುವುದು ಹಾಗೂ ಕೆಮ್ಮು/ಸೀನು ಬಂದಾಗ ರಕ್ಷಣಾತ್ಮಕವಾಗಿ ತಮ್ಮ ಕೈತೋಳುಗಳನ್ನು ಬಳಸಿಕೊಳ್ಳುವಂತೆ ಅರಿವು ಮೂಡಿಸಬೇಕೆಂದು ಅವರು ತಿಳಿಸಿದರು.
ಕೆಮ್ಮು, ಜ್ವರ, ನೆಗಡಿ ಬಂದರೆ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಎಲ್ಲಾ ಜ್ವರ, ಕೆಮ್ಮು, ನೆಗಡಿ ಕರೋನಾ ವೈರಸ್ನಿಂದ ಬಂದಿರುವುದಿಲ್ಲ ಇದರ ಬಗ್ಗೆ ಸಾರ್ವಜನಿಕರು ಗಮನಹರಿಸಿ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕವಾಗಿ ಬಳಸುವ ವಸ್ತುಗಳ ಮತ್ತು ಶಾಲೆ/ಮನೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಆದ್ಯ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಿಲ್ಲಾಮಟ್ಟದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ-2 ಅವರ ನೇತೃತ್ವದಲ್ಲಿ ಹಾಗೂ ತಾಲ್ಲೂಕುಮಟ್ಟದಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ಐ.ಇ.ಸಿ. ಟೀಮ್ ರಚನೆ ಮಾಡಲಾಗಿದೆ. COVID-19 ನ ಎಲ್ಲಾ ಮಾಹಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಪ್ರತಿದಿನ ಮಾಹಿತಿ ನೀಡಲಾಗುತ್ತದೆ.
ಒಟ್ಟಾರೆಯಾಗಿ COVID-19 ಇದರ ಬಗ್ಗೆ ಕಾಲಕಾಲಕ್ಕೆ ಸರ್ಕಾರ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚುತಪ್ಪದೇ ಪಾಲಿಸಲು ಸಿದ್ಧರಾಗಿರಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಅಜಯ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.