ತುಮಕೂರು :
ತಾಲ್ಲೂಕಿನ ಕುಪ್ಪೂರು ಗ್ರಾಮಕ್ಕೆ ಮೂಲಭೂತ ರಸ್ತೆ ಸಂಪರ್ಕ ಕಲ್ಪಿಸಿಕೊಂಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ಬುಗುಡನಹಳ್ಳಿ ಕೆರೆಯಿಂದ ಹೇಮಾವತಿ ನೀರನ್ನು ತುಮಕೂರಿನ ಅಮಾನಿಕೆರೆಗೆ ತುಂಬಿಸುವ ಯೋಜನೆ ಕೊಳವೆ ಮಾರ್ಗ ಅಳವಡಿಸುವ ಕಾರ್ಯ ತಿಪ್ಪೂರು ಗ್ರಾಮದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಮೊದಲು ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ಆ ನಂತರ ತುಮಕೂರು ನಗರಕ್ಕೆ ನೀರು ಕೊಡೊಯ್ಯುವ ಕೊಳವೆ ಮಾರ್ಗ ಕಾಮಗಾರಿ ನಡೆಸಿ ಎಂದು ಗ್ರಾಮಸ್ಥರು ಅಡ್ಡಿಪಡಿಸಿದರು.
ಈ ಸಂದರ್ಭದಲ್ಲಿ ಕುಪ್ಪೂರು ಗ್ರಾಮದ ಸರ್ಕಾರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕುಮಾರ್ ಮಾತನಾಡಿ, ನಮ್ಮ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಂಸದರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಪಂ ಸಿಇಒ, ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬಂದು ರಸ್ತೆ ಮಾಡಿಸುವ ಭರವಸೆ ನೀಡಿ ಹೋಗುತ್ತಾರೆಯೇ ವಿನಃ ನಂತರ ಇತ್ತ ತಿರುಗಿಯೂ ನೋಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ನಗರಕ್ಕೆ ಹೋಗಬೇಕಾದರೆ 7 ಕಿ.ಮೀ. ದೂರ ಕ್ರಮಿಸಬೇಕು, ಬಸ್ ಸೌಲಭ್ಯವಿಲ್ಲ, ನಡದೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ 1 ರಿಂದ 7 ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಹೈಸ್ಕೂಲ್ಗೆ ತೆರಳಬೇಕಾದರೆ ಬುಗುಡನಹಳ್ಳಿಗೆ ನಡೆದೇ ಹೋಗಬೇಕು, ಇಲ್ಲವಾದರೆ ತುಮಕೂರಿನ ಶಿರಾಗೇಟ್ಗೆ ಮಕ್ಕಳು ನಡೆದೇ ಹೋಗಬೇಕಾದ ಪರಿಸ್ಥಿತಿ ಇದೆ. ಇಂತಹ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಊರುಕೆರೆ ಗ್ರಾಪಂ ಸದಸ್ಯ ಕುಪ್ಪೂರಿನ ಮಂಜುನಾಥ್ ಮಾತನಾಡಿ, ಈ ಗ್ರಾಮದಲ್ಲಿ ಸುಮಾರು 2000 ಜನಂಖ್ಯೆ ಹೊಂದಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇದುವರೆಗೂ ಈ ಗ್ರಾಮದ ಸಮಸ್ಯೆ ನಿವಾರಿಸಲು ಯಾವ ಅಧಿಕಾರಿಗಳೂ ಬಂದಿಲ್ಲ, ನಾವು ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಪರಿಣಾಮ ಇಂದು ಗ್ರಾಮಕ್ಕೆ ತಹಶೀಲ್ದಾರ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೂ ನಮಗೆ ತ್ವರಿತವಾಗಿ ರಸ್ತೆ ನಿರ್ಮಾಣವಾಗಬೇಕೆಂಬುದು ನಮ್ಮ ಉದ್ಧೇಶ ಎಂದರು.
ಗ್ರಾಮಕ್ಕೆ ತಹಶೀಲ್ದಾರ್ ಭೇಟಿ :
ಕಾಮಗಾರಿ ತಡೆ ಹಿಡಿದಿರುವ ಮಾಹಿತಿ ಅರಿತ ತಹಶೀಲ್ದಾರ್ ಮೋಹನ್ಕುಮಾರ್ ಕುಪ್ಪೂರು ಗ್ರಾಮಕ್ಕೆ ಸೋಮವಾರ ಸಂಜೆ ಭೇಟಿ ನೀಡಿ, ಸಾರ್ವಜನಿಕರಿಂದ ಗ್ರಾಮದ ಸಮಸ್ಯೆಯನ್ನು ಆಲಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ಮೋಹನ್ಕುಮಾರ್, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕುಪ್ಪೂರು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಿದ್ದೇನೆ, ಪ್ರಸ್ತುತ 25-30 ಅಡಿ ರೂಢಿದಾರಿ ಇದೆ. ಈ ಭಾಗದಲ್ಲಿ ಕರಾಬು ಜಮೀನು ಎಲ್ಲೆಲ್ಲಿ ಇದೆ ಎಂಬುದನ್ನು ಸರ್ವೆ ಕಾರ್ಯ ಮಾಡಿಸಿ, ಕರಾಬು ಜಮೀನು ಇಲ್ಲದಿದ್ದರೆ, ಜಮೀನಿನ ಮಾಲೀಕರೊಂದಿಗೆ ಮನವೊಲಿಸಿ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲ ಎಂಬುದನ್ನು ಮನಗಂಡಿದ್ದೇನೆ, ಇನ್ನು ನಾಲ್ಕೈದು ದಿನಗಳ ನಂತರ ಸರ್ವೆ ಕಾರ್ಯ ಮಾಡಿಸಿ, ಜಮೀನಿನ ಮಾಲೀಕರು ಯಾರಾದರೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರೆ, ಒತ್ತುವರಿ ತೆರವುಗೊಳಿಸಿ, ಕರಾಬು ಜಮೀನಿದ್ದರೆ ಅದನ್ನು ರಸ್ತೆಯನ್ನಾಗಿ ಮಾಡಲು ಕಂದಾಯಾಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಂತರ ಗ್ರಾಮಸ್ಥರು ಬುಗುಡನಹಳ್ಳಿ ಕೆರೆಯಿಂದ ತುಮಕೂರು ಅಮಾನಿಕೆರೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕೊಳವೆ ಮಾರ್ಗ ಕಾಮಗಾರಿ ನಡೆಯಲು ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.