ತುಮಕೂರು :
ನಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರು ಶುದ್ಧವಿರಬೇಕು. ವೈಯಕ್ತಿಕವಾಗಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಅಂದರೆ ಪದೇ ಪದೇ ಸಾಬೂನು ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಅನವಶ್ಯಕವಾಗಿ ಪ್ರವಾಸ ಅಥವಾ ಹೊರಗೆ ಓಡಾಡುವುದನ್ನು ತಪ್ಪಿಸಬೇಕು- ಹೀಗೆ ಸಾರ್ವಜನಿಕರಿಗೆ ಹಲವು ಸಲಹೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ನೀಡಿದ್ದಾರೆ.
ಮಾರಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ತುಮಕೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಮೇಯರ್ ಫರೀದಾ ಬೇಗಂ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಪಾಲಿಕೆಯ ತುರ್ತುಸಭೆಯಲ್ಲಿ ಆಹ್ವಾನಿತರಾಗಿ ಅವರು ಮಾತನಾಡುತ್ತಿದ್ದರು.
ಕೊರೋನಾ ವೈರಸ್ ಹರಡುವ ಮೊದಲನೇ ಹಂತ, ಎರಡನೇ ಹಂತ ದಾಟಿ ಮೂರನೆಯ ಹಂತದಲ್ಲಿ ನಾವಿದ್ದೇವೆ. ವಿದೇಶದಿಂದ ಬಂದವರಿಂದ ಇದು ಹರಡುವ ಸಾಧ್ಯತೆ ಇರುವುದರಿಂದ, ವಿದೇಶ ಪ್ರಯಾಣ ಮಾಡಿಬಂದಿರುವವರ ಹಾಗೂ ಅವರೊಂದಿಗಿರುವವರ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕಾಗಿದೆ. ಈ ವೈರಸ್ ಗಾಳಿಯಿಂದ ಹರಡುವುದಿಲ್ಲ. ಪರಸ್ಪರ ಕೈಕುಲುಕುವುದರಿಂದ ಕೈಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ತಗಲುತ್ತದೆ. ಬಳಿಕ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ.
ವಿದೇಶ ಪ್ರವಾಸ ಮಾಡಿಬಂದವರ ಬಗ್ಗೆ ಮಾಹಿತಿ ಇದ್ದರೆ ಅದನ್ನು ನಮಗೆ ಒದಗಿಸಿ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂದಿನ ಪ್ರಕ್ರಿಯೆಯನ್ನು ಹಾಗೂ ಮುನ್ನೆಚ್ಚರಿಕೆಯನ್ನು ನಾವು ಮುಂದುವರೆಸುತ್ತೇವೆ ಎಂದು ಅವರು ವಿವರಿಸಿದರು.
ಸ್ವಚ್ಛತೆ ಕಾಪಾಡಬೇಕು:
ಪ್ರತಿಯೊಬ್ಬರೂ ತಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನೂ ಕಾಪಾಡಬೇಕು. ಇದಕ್ಕೆ ಎಲ್ಲರೂ ಆದ್ಯ ಗಮನ ಕೊಡಬೇಕು. ಇದರೊಂದಿಗೆ ಶುದ್ಧಕುಡಿಯುವ ನೀರನ್ನು ಬಳಸಬೇಕು ಎಂದರು.
ಮಾಸ್ಕ್ ಯಾರಿಗೆ?
ಸೋಂಕಿರುವ ಪ್ರದೇಶದಿಂದ ಬಂದವರು ಮಾಸ್ಕ್ ಹಾಕಬೇಕು. ಕೊರೋನಾ ರೋಗ ಲಕ್ಷಣಗಳಿರುವವರು ಮಾಸ್ಕ್ ಹಾಕಬೇಕು. ಶಂಕಿತರಿಗೆ/ರೋಗಲಕ್ಷಣವುಳ್ಳವರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿ ಮಾಸ್ಕ್ ಹಾಕಬೇಕು. ಉಳಿದಂತೆ ಮಾಸ್ಕ್ ಧರಿಸುವುದು ಅವರವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಡಿ.ಎಚ್.ಓ. ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದರು.
ಮಾಸ್ಕ್ ಧರಿಸುವ ಬಗ್ಗೆಯೂ ಒಂದು ಕ್ರಮವಿದ್ದು, ಉಪಯೋಗಿಸುವವರು ಅದನ್ನು ಪಾಲಿಸಬೇಕು. ಒಂದು ಮಾಸ್ಕ್ ಅನ್ನು 6 ರಿಂದ 8 ಗಂಟೆಯವರೆಗೆ ಉಪಯೋಗಿಸಬಹುದಾಗಿದೆ. ಪದೇ ಪದೇ ಮಾಸ್ಕ್ನ್ನು ಕೈಗಳಿಂದ ಮುಟ್ಟುತ್ತಿರಬಾರದು. ಇಂತಹ ಕ್ರಮಗಳನ್ನು ಅನುಸರಿಸದಿದ್ದರೆ, ಅನುಕೂಲಕ್ಕಿಂತ ಅನಾನುಕೂಲವೇ ಅಧಿಕವಾಗುತ್ತದೆ. ಆದ್ದರಿಂದ ಯಾರು, ಯಾವಾಗ, ಏಕೆ ಮಾಸ್ಕ್ ಧರಿಸಬೇಕೆಂಬುದನ್ನು ಮೊದಲಿಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಬಟ್ಟೆ ಸಾಬೂನಾದರೂ ಸಾಕು:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿ.ಎಚ್.ಓ. ಅವರು, ಕೊರೋನಾ ರೋಗ ಹರಡಲು ಮನುಷ್ಯನ ಕೈಗಳೇ ಮೊದಲ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಪದೇ ಪದೇ ತೊಳೆದುಕೊಳ್ಳುತ್ತಲೇ ಇರಬೇಕು. ಎಲ್ಲರೂ ಸ್ಯಾನಿಟೈಸರ್ ಖರೀದಿಸಿ ಕೈತೊಳೆದುಕೊಳ್ಳಲು ಸಾಧ್ಯವಾಗದು. ಅದರಲ್ಲೂ ಬಡಜನರು ಖರೀದಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನೆಯಲ್ಲಿರುವ ಬಟ್ಟೆ ಸಾಬೂನನ್ನಾದರೂ ಬಳಸಿ, ಕೈತೊಳೆದುಕೊಳ್ಳಬೇಕು. ವೈರಸ್ ಹರಡುವುದನ್ನು ತಡೆಯಲು ಇದು ತುಂಬ ಸಹಕಾರಿ ಆಗುತ್ತದೆ ಎಂದರು.
ಇಂದಿನ ಈ ಧೂಳಿನ ವಾತಾವರಣದಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ ಬರುವುದು ಸಹಜ ಹಾಗೂ ಸಾಮಾನ್ಯ. ಕೆಮ್ಮು, ನೆಗಡಿ ಬಂದಾಕ್ಷಣ ಕೊರೋನಾ ಎಂದು ಆತಂಕ ಪಡಬೇಕಾಗಿಲ್ಲ. ತಕ್ಷಣವೇ ಸಮೀಪದ ವೈದ್ಯರ ಬಳಿ ಎಂದಿನಂತೆ ಚಿಕಿತ್ಸೆ ಪಡೆಯಬೇಕು. ಅದೇ ರೀತಿ ಕೋಳಿ ಅಥವಾ ಮಾಂಸಾಹಾರದಿಂದಲೂ ಕೊರೋನಾ ಬರುವುದಿಲ್ಲ. ಕೋಳಿಯಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದ್ದರೆ ಮಾತ್ರ ಅದನ್ನು ತಿನ್ನುವವರಿಗೆ ಸಂಬಂಧಿಸಿದ ರೋಗ ಬರುವುದೆಂದು ಆತಂಕಪಡಬೇಕಾಗುತ್ತದೆ. ಉಳಿದಂತೆ ಆತಂಕ ಪಡಬೇಕಿಲ್ಲ.
ಬೀದಿಬದಿ ಆಹಾರ ಪದಾರ್ಥಗಳನ್ನು ಮಾರುವವರು ಸ್ವಚ್ಛತೆ ಕಾಪಾಡಬೇಕು; ಇದನ್ನು ತಿನ್ನುವರರು ಎಚ್ಚರಿಕೆ ವಹಿಸಬೇಕು. ಇನ್ನು ನಮ್ಮ ಜನರಿಗೆ ಎಲ್ಲೆಂದರಲ್ಲಿ ಉಗುಳುವ ಅಭ್ಯಾಸವಿದ್ದು, ಅದನ್ನು ತಪ್ಪಿಸಲು ಜಾಗೃತಿ ಮೂಡಿಸಬೇಕಾಗಿದೆ ಎಂದು ಪಾಲಿಕೆ ಸದಸ್ಯರ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.
ಅನಗತ್ಯ ಓಡಾಟ ಬೇಡ:
ಕೊರೋನಾ ವೈರಸ್ 9 ರಿಂದ 12 ದಿನಗಳ ಕಾಲ ಸಕ್ರಿಯವಾಗಿರುತ್ತದೆಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲೇ ರೋಗ ಲಕ್ಷಣವುಳ್ಳವರು, ಶಂಕಿತರು 14 ದಿನಗಳ ಕಾಲ ಏಕಾಂತದಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. ಇಂದಿನ ಪೀಳಿಗೆಯ ಜನರನ್ನು ಈ ರೀತಿ ದೀರ್ಘಕಾಲ ಮನೆಯಲ್ಲೇ ಇರುವಂತೆ ಮಾಡುವುದು ಬಹುದೊಡ್ಡ ಸಾಹಸವೇ ಆಗಿಬಿಡುತ್ತದೆ. ಆದರೂ ಈಗ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ಪ್ರವಾಸ ಮಾಡುವುದು ಹಾಗೂ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ನಿಯಂತ್ರಿಸಿದರೆ, ಶೇ. 80 ರಷ್ಟು ಪ್ರಮಾಣದಲ್ಲಿ ಈ ರೋಗವನ್ನು ನಿಯಂತ್ರಣ ಮಾಡಬಹುದು ಎಂದು ಡಾ.ಚಂದ್ರಿಕಾ ಅಭಿಪ್ರಾಯಪಟ್ಟರು.
10 ವರ್ಷದೊಳಗಿನ ಮಕ್ಕಳಿಗೆ, 60 ವರ್ಷ ದಾಟಿದ ಹಿರಿಯರಿಗೆ, ಗರ್ಭಿಣಿಯರು, ಬಾಣಂತಿಯರು, ಕ್ಷಯ ರೋಗ ಪೀಡಿತರು, ಸಕ್ಕರೆ ಕಾಯಿಲೆಯುಳ್ಳವರು, ಎಚ್.ಐ.ವಿ. ಸೋಂಕಿತರು ಬೇಗ ಕೊರೋನಾಗೆ ಒಳಗಾಗುವ ಸಾಧ್ಯತೆಯಿದೆ. ಒಟ್ಟಾರೆ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ, ಈ ರೋಗ ಅಷ್ಟೇ ಬೇಗ ಬರುತ್ತದೆ ಎಂದು ಡಿ.ಎಚ್.ಓ. ಡಾ. ಚಂದ್ರಿಕಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಪೌರಕಾರ್ಮಿಕರಿಗೆ ಪಾಲಿಕೆಯಲ್ಲಿ ಆರೋಗ್ಯ ತಪಾಸಣೆ :
ಸಭೆಯಲ್ಲಿ ಮಾತನಾಡಿದ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆಯಲ್ಲಿ 500 ಜನ ಪೌರಕಾರ್ಮಿಕರಿದ್ದು, ಪ್ರತಿನಿತ್ಯ ಅವರೆಲ್ಲರೂ ಅತ್ಯಂತ ಕಷ್ಟಕರವಾದ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಅವರ ಆರೋಗ್ಯ ರಕ್ಷಣೆ ಅತಿಮುಖ್ಯ. ಆದ್ದರಿಂದ ಪಾಲಿಕೆ ಕಚೇರಿಯಲ್ಲೇ ತಕ್ಷಣವೇ ಒಂದು ಕೊಠಡಿಯನ್ನು ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಮೀಸಲಿಡಬೇಕು. ಇಲ್ಲೊಬ್ಬರು ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಇದಕ್ಕೆ ಆಯುಕ್ತ ಟಿ.ಭೂಬಾಲನ್ ಒಪ್ಪಿಗೆ ಸೂಚಿಸಿ, ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸದಸ್ಯ ಶ್ರೀನಿವಾಸಮೂರ್ತಿ ಮಾತನಾಡಿ, ನಗರದ ಆರ್.ಟಿ.ಓ. ಕಚೇರಿ ಪಕ್ಕದ ರಸ್ತೆಯ ಬೀದಿಬದಿ ವ್ಯಾಪಾರ ಯಾವುದೇ ಅಡೆತಡೆ ಇಲ್ಲದೆ ನಡೆದಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರಲ್ಲದೆ, ಬಟವಾಡಿ ಭಾಗದಲ್ಲಿ ಒಂದು ಆರೋಗ್ಯ ಕೇಂದ್ರ ತೆರೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.
ಸಭೆಯಲ್ಲಿ ಮೇಯರ್ ಫರೀದಾಬೇಗಂ ಮಾತನಾಡಿ, ಈಗ ಕೊರೋನಾ ಆತಂಕ ಎಲ್ಲೆಲ್ಲೂ ಕಾಡುತ್ತಿದ್ದು, ಈ ಬಗ್ಗೆ ಪಾಲಿಕೆಯಿಂದ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದರು. ಆಯುಕ್ತ ಟಿ.ಭೂಬಾಲನ್ ಮಾತನಾಡುತ್ತ, ಕೊರೋನಾ ತಡೆಗಟ್ಟಲು ವೈಯಕ್ತಿಕ ಸುರಕ್ಷತಾ ಕ್ರಮಗಳು ತುಂಬ ಪರಿಣಾಮಕಾರಿಯಾದುದು ಎಂದರು.
ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ತೆರಿಗೆ-ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಸದಸ್ಯರುಗಳಾದ ಸಿ.ಎನ್.ರಮೇಶ್, ಎಂ.ಕೆ.ಮನು, ಸೈಯದ್ ನಯಾಜ್, ಲಕ್ಷ್ಮೀನರಸಿಂಹರಾಜು, ಮೊದಲಾದವರು ಮಾತನಾಡಿ ವಿವಿಧ ಪ್ರಶ್ನೆಗಳನ್ನು ಕೇಳಿದರು. ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಸ್ವಾಗತಿಸಿದರು.
ನಮ್ಮನ್ನು ಸಂಪರ್ಕಿಸಿ:
ಕೊರೋನಾ ರೋಗ ಲಕ್ಷಣಗಳು ಎಲ್ಲಿಯಾದರೂ ಕಾಣಿಸಿದರೆ, ವಿದೇಶ ಪ್ರವಾಸದವರ ಬಗ್ಗೆ ಮಾಹಿತಿಯಿದ್ದರೆ ನಮಗೆ ಮಾಹಿತಿ ನೀಡಿ ಎಂದು ಡಿ.ಎಚ್.ಓ. ಡಾ. ಚಂದ್ರಿಕಾ ಅವರು ಕಾಪೆರ್Çರೇಟರ್ಗಳಿಗೆ ಮನವಿ ಮಾಡುತ್ತ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಲ್ಪ್ಲೈನ್ ಸಂಖ್ಯೆಯನ್ನು ನೀಡಿದರು.ಮೊಬೈಲ್:- 94498 43064, ಹೆಲ್ಪ್ಲೈನ್ ಸಂಖ್ಯೆಗಳು:- 0816- 2278387 ಮತ್ತು 0816- 2251414