ತುಮಕೂರು :
ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗಾ ಹೋಬಳಿ ದಾಸಲುಕುಂಟೆ ಗ್ರಾಮದ ನಿವಾಸಿ ಮಂಜುನಾಥ್ ಎಂಬ ರೈತನಿಂದ 15ಸಾವಿರ ರೂ.ಗಳ ಲಂಚದ ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಚನ್ನೇಗೌಡ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದ ಹಿನ್ನೆಲೆ:
ದಾಸಲುಕುಂಟೆ ಗ್ರಾಮದ ಮಂಜುನಾಥ್ ಅವರ ತಾಯಿ ನಾಗರತ್ನಮ್ಮ ಅವರ ಹೆಸರಿಗೆ ಕ್ರಯವಾಗಿರುವ ದಾಸಲುಕುಂಟೆ ಗ್ರಾಮದ ಸರ್ವೇ ನಂ.34ರ ಎರಡು ಎಕರೆ 37 ಗುಂಟೆ ಜಮೀನಿನ ಪಹಣಿ ಮತ್ತು ಖಾತೆ ಬದಲಾವಣೆ ಮಾಡಿಸಿಕೊಡುವ ಸಲುವಾಗಿ ಗ್ರಾಮ ಲೆಕ್ಕಿಗ ಚನ್ನೇಗೌಡ 30ಸಾವಿರ ರೂ.ಗಳ ಹಣಕ್ಕೆ ಬೇಡಿಕೆ ಇಟ್ಟು ನಂತರ 15ಸಾವಿರ ರೂ.ಗಳಿಗೆ ಒಪ್ಪಿ ಮುಂಗಡವಾಗಿ 5ಸಾವಿರ ರೂ. ಹಣವನ್ನು ಪಡೆದುಕೊಂಡಿರುತ್ತಾನೆ.
ನಂತರ ಮಾರ್ಚ್ 20ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಸಾರ್ವಜನಿಕ ವಾಚನಾಲಯದಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಛೇರಿಯಲ್ಲಿ ಉಳಿದ ಲಂಚದ ಹಣವನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್‍ಪಿ ಬಿ.ಉಮಾಶಂಕರ್ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‍ಪೆಕ್ಟರ್ ವಿ.ಪ್ರವೀಣ್ ಕುಮಾರ್ ಅವರು ದಾಳಿ ನಡೆಸಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.
ಈ ದಾಳಿಯಲ್ಲಿ ಎಸಿಬಿ ಸಿಬ್ಬಂದಿಗಳಾದ ಕೆ.ಪಿ.ಶಿವಣ್ಣ, ಎಂ.ಚಂದ್ರಶೇಖರ್, ಎಲ್.ನರಸಿಂಹರಾಜು, ಟಿ.ಎಸ್.ಗಿರೀಶ್‍ಕುಮಾರ್, ವಿ.ಮಹೇಶ್‍ಕುಮಾರ್ ಮತ್ತು ರಮೇಶ್ ಭಾಗಿಯಾಗಿದ್ದರು.