ಚಿಕ್ಕನಾಯಕನಹಳ್ಳಿ :
ರಾಗಿ ಖರೀದಿ ಕೇಂದ್ರದ ಮುಂದೆ ಸರತಿಯಲ್ಲಿ ನಿಂತು ಸರ್ಕಾರದ ಬೆಂಬಲಬೆಲೆಗೆ ರಾಗಿಯನ್ನು ರೈತರು ಮುಗಿಬಿದ್ದು ಮಾರಾಟ ಮಾಡುತ್ತಿದ್ದಾರೆ.
ತಾಲ್ಲೂಕು ಅತಿ ಹೆಚ್ಚು ರಾಗಿಬೆಳೆ ಬೆಳೆಯಲಾಗುತ್ತಿದೆ. ಕಳೆದ ವರ್ಷ ಉತ್ತಮ ಮಳೆಗಾಲ ಆದಕಾರಣ ಬಂಪರ್‍ಬೆಳೆಯನ್ನು ರೈತರು ನಿರೀಕ್ಷಿಸಿದ್ದರು ಆದರೆ . ಕೆಲವಡೆ ಅತಿಹೆಚ್ಚು ಮಳೆಯಾದಕಾರಣ ಉತ್ತಮವಾಗಿ ಬೆಳೆದುನಿಂತ ರಾಗಿಯ ಮೇಲೆ ತೀವ್ರ ಪರಿಣಾಮ ಬೀರಿತು, ಮತ್ತೆ ಕೆಲವಡೆ ಹೊಲದಲ್ಲಿ ಕೊಯ್ದರಾಗಿಗಳು ಅಲ್ಲೆ ಮಣ್ಣುಪಾಲಾದಾರೂ ಒಟ್ಟಾರೆ ತಾಲ್ಲೂಕಿನಲ್ಲಿ ಬೆಳೆದ ರೈತರಿಗೆ ಆನ್ಯಾಯವೆಸಗದೆ ಉತ್ತಮ ಇಳುವರಿ ದೊರೆತಿದೆ. ಆದರೆ ಈಗಿನ ರೈತರ ಶ್ರಮ ಹಾಗೂ ಖರ್ಚಿನ ದೃಷ್ಠಿಯಿಂದ ನೋಡಿದರೆ ರಾಗಿ ಬೆಳೆಯುವ ಸಣ್ಣ ಹಾಗೂ ಮಧ್ಯಮವರ್ಗದ ರೈತರಿಗೆ ಲಾಭದಾಯಕವಂತೂ ಅಲ್ಲ. ಮುಂದಿನ ದಿನಗಳಲ್ಲಿ ಮನೆಯಲ್ಲಿರುವ ರಾಸುಗಳ ಮೇವಿನ ಸಮಸ್ಯೆ ನೀಗಲಿದೆ ಎಂಬ ಸಮಾಧಾನ ರೈತರಿಗಿದೆ.
ಕಳೆದ ನಾಲ್ಕೈದು ವರ್ಷ ಒಳ್ಳೆ ಮಳೆಗಾಲವಾಗದ ಕಾರಣ ರಾಗಿಬೆಳೆ ಹಾಗೂ ಬೆಳೆಯುವ ಪ್ರದೇಶ ಕುಂಟಿತಗೊಂಡುತ್ತಾ ಸಾಗಿತ್ತು. ಇದೆಲ್ಲಾ ಕಾರಣದಿಂದ ರಾಗಿಯ ಬೆಲೆ ಗಗನಕ್ಕೇರಿತ್ತು. ಆದರೆ ಈ ಸಾರಿ ಬಂಬರ್ ಬೆಳೆಬಂದ ಕಾರಣ ದರ ದಿಡೀರನೆ ಕಡಿಮೆಯಾಯಿತು. ಹೆಚ್ಚುರಾಗಿ ಬೆಳೆದ ಖುಷಿಯನ್ನು ದರಕುಸಿತ ಕಸಿದುಕೊಂಡಿತು. ಕ್ವಿಂ.ಗೆ ರೂ.5000ದಷ್ಟಿದ್ದ ರಾಗಿ 2000ರೂ. ಆಜುಬಾಜು ಬಂದಿತ್ತು.
ಸರ್ಕಾರದ ಬೆಂಬಲಬೆಲೆ 3150ರೂ.ಗಳನ್ನು ನಿಗಧಿಮಾಡಿ ಖರೀದಿ ಕೇಂದ್ರ ತೆರದಾಗ ರೈತರು ಕೃಷಿ ಇಲಾಖೆಯಿಂದ ದಾಖಲೆಗಳನ್ನು ಪಡೆದು ಖರೀದಿ ಕೇಂದ್ರದಲ್ಲಿ ನೊಂದಣಿ ಮಾಡುವ ಪ್ರಕ್ರಿಯೆ ಶುರುವಾಯಿತು. ಆರಂಭದಲ್ಲಿ ನೊಂದಣಿ ಮಾಡುವವರ ಸಂಖ್ಯೆ ಕಡಿಮೆಯಿದ್ದು ಖರೀದಿಯ ಭರಾಟೆ ಶುರುವಾರ ಬೆನ್ನಲ್ಲೆ ನೊಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.
ಮಾ.5ರಿಂದ ಈವರೆಗೆ 2172 ರಾಗಿ ಬೆಳೆಯುವ ರೈತರು ನೊಂದಣಿ ಮಾಡಿಸಿದ್ದಾರೆ. ಇದರಲ್ಲಿ 1568 ರೈತರು ಫಲಾನುಭವಿಗಳಾಗಿದ್ದಾರೆ. ಈವರೆಗೆ 34690 ಕ್ವಿಂಟಲ್ ರಾಗಿ ಖರೀದಿಯಾಗಿದೆ.
ಖರೀದಿ ಕೇಂದ್ರದಲ್ಲಿ ರಾಗಿಯ ಗುಣಮಟ್ಟವನ್ನು ಕೃಷಿಇಲಾಖೆಯ ಅಧಿಕಾರಿಗಳು ಮಾಡಿದರೆ, ತೂಕಹಾಕಿ ಖರೀದಿ ಮಾಡುವುದನ್ನು ಖರೀದಿ ಕೇಂದ್ರದ ಸಿಬ್ಬಂದಿ ಮಾಡುತ್ತಾರೆ. ರಾಗಿಯ ಗುಣಮಟ್ಟದಂತೆ ಕರಿರಾಗಿ , ಗಿಡ್ಡರಾಗಿ,ಹಾಗೂ ಕೆಂಪುರಾಗಿಗಳ ವರ್ಗಿಕರಣವಿಲ್ಲ, ಜೊಳ್ಳಿಲ್ಲದ ಎಲ್ಲಾವಿಧದ ಉತ್ತಮ ರಾಗಿಗೆ ಒಂದೆದರ ನಿಗಧಿಪಡಿಸಲಾಗಿದೆ. ಕೆಲವೊಂದುಸಾರಿ ಅಧಿಕಾರಿಗಳು ರಾಗಿಯ ಗುಣಮಟ್ಟವನ್ನು ರೈತರೆದುರಿಗೆ ಹಳಿದು ಖರೀದಿಗೆ ಯೋಗ್ಯವಲ್ಲವೆಂಬ ಭಯವನ್ನು ಹುಟ್ಟಿಸುವ ಪ್ರಸಂಗಳು ಆರಂಭದಲ್ಲಿ ನಡೆದವು. ಆದರೆ ಈಗ ಇದಕ್ಕೆಲ್ಲಾ ವಿರಾಮ ಬಿದ್ದಿದೆ.ನಿಜವಾದ ಫಲಾನುಭವಿಗಳಿಗೆ ಬೆಂಬಲ ಬೆಲೆ ದೊರೆಯಲಿ ಎಂಬ ಕಾರಣಕ್ಕೆ ನೊಂದಣಿ ಪ್ರಕ್ರಿಯೆ ಜಾರಿಗೆ ತರಲಾಗಿತ್ತು. ಇದರಿಂದ ನಿಜವಾದ ರೈತರಿಗೆ ಸರ್ಕಾರದ ಬೆಂಬಲಬೆಲೆ ದೊರೆಯುತ್ತಿದೆ. ಆದರೂ ಈಚೆಗೆ ಕೆಲ ವರ್ತಕರು ರೈತರ ಫಹಣಿ ಪಡೆದು ಕಡಿಮೆ ಬೆಲೆಯಲ್ಲಿ ಈ ಹಿಂದೆ ಕೊಂಡಿದ್ದ ರಾಗಿಯನ್ನು ಮಾರಾಟ ಮಾಡುವ ಯತ್ನಗಳುಸಹ ನಡೆದಿದೆ.
ನೊಂದಣಿ ಸಮಯದಲ್ಲಿ ರಾಗಿಕೇಂದ್ರಕ್ಕೆ ರಾಗಿ ತರಲು ಕೂಪನ್‍ಗಳನ್ನು ನೀಡಲಾಗುತ್ತದೆ. ದಿನವೊಂದಕ್ಕೆ 50ರಿಂದ 60 ಮಂದಿಗೆ ಟೋಕನ್ ನೀಡುವುದರಿಂದ ಟೋಕನ್ ಪಡೆದ ರೈತರು ವಾಹನಗಳಲ್ಲಿ ತಂದ ತಮ್ಮ ರಾಗಿಯನ್ನು ಮಾರಲು ಹಿಂದಿನದಿನ ಸರಿರಾತ್ರಿಯಲ್ಲಿಯೇ ಕೇಂದ್ರದಮುಂದೆ ಸರತಿಯಲ್ಲಿ ಕಾಯುತ್ತಿರುತ್ತಾರೆ. ಹೆಚ್ಚು ಮೂಟೆಗಳು ಬಂದ ರಾಗಿಯ ಲಾಟ್‍ನಲ್ಲಿ ಕೆಲವು ಚೀಲಗಳನ್ನು ಮಾತ್ರ ತೂಗಲಾಗುತ್ತದೆ. ತೂಗಿದ ನಂತರ ಫಲಾನುಭವಿಗಳಿಗೆ ಚೆಕ್‍ಗಳನ್ನು ವಿತರಿಸಲಾಗುತ್ತದೆ.
ನೊಂದಣಿ ಹಾಗೂ ಖರೀದಿಯನ್ನು ಈ ತಿಂಗಳ ಅಂತ್ಯಕ್ಕೆ ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಕೊರೊನಾ ಅನ್ವಯ ಹೆಚ್ಚು ಮಂದಿ ಸೇರಬಾರದೆಂಬ ನಿಯಮಕ್ಕೆ ಧಕ್ಕೆ ಬರುತ್ತಿದ್ದು, ಖರೀದಿ ಪ್ರಕ್ರಿಯೆಯನ್ನು ಮೊಟಕುಗೊಳಿಸಬಹುದೆಂಬ ಆತಂಕ ಕೆಲವರಲ್ಲಿದೆ.ಒಟ್ಟಾರೆ ಬೆಂಬಲಬೆಲೆಯಲ್ಲಿ ರಾಗಿ ಖರೀದಿ ಜೋರಾಗಿ ನಡೆದಿದೆ.