ತುಮಕೂರು :
ವಿಶ್ವದಾದ್ಯಂತ ಕಾಡುತ್ತಿರುವ ಕೊರೊನಾ ವೈರಾಣು ಸೋಂಕಿನ ವಿರುದ್ಧ ದೇಶ ಮತ್ತು ನಾಡಿನ ಜನತೆ ಹೋರಾಟ ನಡೆಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕಫ್ರ್ಯೂನಂತೆ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರಿಕೊಂಡು ಸುಮಾರು 15 ದಿನಗಳ ಕಾಲ ಮನೆಯಿಂದ ಹೊರಗೆ ಬಾರದೆ ಈ ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು, ಈ ಮಹಾಮಾರಿಯನ್ನು ದೇಶದಿಂದ ಓಡಿಸಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಭಕ್ತರಿಗೆ ನಿರ್ಬಂಧ:
ರಾಜ್ಯದಲ್ಲಿ ಕೊರೊನಾ ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದರು. ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿಯೇ ಮುಂದಾಗಬೇಕು. ಹಾಗಾಗಿ ಭಕ್ತರೂ ಮಠಕ್ಕೆ ಬರಬಾರದು ಎಂದು ಅವರು ಮನವಿ ಮಾಡಿದರು. ಶ್ರೀಮಠದಲ್ಲಿ ಇನ್ನೂ 1500 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಮನೆಗೆ ಹೋಗಲು ಇಷ್ಟಪಟ್ಟಿಲ್ಲ. ಹಾಗಾಗಿ ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗಿದೆ. ಸೂಕ್ತ ತಪಾಸಣೆ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.