ತಿಪಟೂರು:

      ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಕೃಷಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಖಿಲ ಭಾರತ ರೈತ ಸಂಘರ್ಷ ವತಿಯಿಂದ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು.

      ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನ.30ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರದ ಎಲ್ಲಾ ಜಿಲ್ಲೆಗಳಿಂದ ಬಂದಂತಹ ರೈತರ ಸಮಾವೇಶವನ್ನು ಮಾಡಲಾಗುವುದು. ಡಾ. ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನ ವೆಚ್ಚದ ಮೇಲೆ ಕನಿಷ್ಠ 50ರಷ್ಟು (ಸಿ2+50) ಲಾಭವನ್ನು ಸೇರಿಸಿ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ಎಲ್ಲಾ ರೈತರಿಗೆ ಕೃಷಿ ಕೂಲಿ ಕಾರ್ಮಿಕರಿಗೆ ಅಗತ್ಯವಿರುವಷ್ಟು ಕಡಿಮೆ ಬಡ್ಡಿಯ ಬ್ಯಾಂಕ್ ಸಾಲ ನೀಡಬೇಕು. ಸಾಲಮನ್ನವನ್ನು ಖಾತ್ರಿಗೊಳಿಸುವ ಋಣಮುಕ್ತ ಕಾಯಿದೆಗಳನ್ನು ಕೂಡಲೇ ಲೋಕಸಭೆಯಲ್ಲಿ ವಿಶೇಷ ಸಮಸ್ಯೆಗಳೆಂದು ಪರಿಗಣಿಸಿ ಅಧಿವೇಶನದಲ್ಲಿ ಅವಕಾಶ ಮಾಡಿಕೊಂಡು ಮೇಲ್ಕಂಡ ಎರಡು ವಿಷಯಗಳ ಬಗ್ಗೆ ಚರ್ಚೆ ಮಾಡಿ ಮಸೂದೆಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿದರು.

ತಾಲ್ಲೂಕು ರೈತಸಂಘ ಅಧ್ಯಕ್ಷ ದೇವರಾಜು ಮಾತನಾಡಿ ದೇಶದ 200ಕ್ಕೂ ಹೆಚು ರೈತ ಮತ್ತು ಕೃಷಿ ಕಾರ್ಮಿಕ ಸಂಘಟನೆಗಳು ಸೇರಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಚಿಸಿಕೊಂಡು ರೈತಮುಕ್ತಿ ಮಹಾ ಪಾದಯಾತ್ರೆ ಮತ್ತು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ನವೆಂಬರ್ 27ರಂದು ವಿಶೇಷ ರೈಲಿನಲ್ಲಿ ಪರಯಾಣಿಸಲು ತೀರ್ಮಾನಿಸಿದ್ದು, ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ರೈತರು ಮುಂಗಡವಾಗಿ ನೊಂದಾಯಿಸಿಕೊಂಡು ಈ ಪ್ರಯಾಣಕ್ಕೆ ಅಣಿಯಾಗಬೇಕೆಂದು ರೈತ ಸಂಘವು ಮನವಿ ಮಾಡುತ್ತದೆ ಎಂದರು.

 

(Visited 11 times, 1 visits today)