ತುಮಕೂರು:

      ಸರ್ಕಾರದ ಸೂಚನೆಯಂತೆ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಕಡ್ಡಾಯವಾಗಿ ತೆರೆಯವುದು ಮತ್ತು ಬಾಡಿಗೆ ಮನೆಯಲ್ಲಿರುವ ವೈದ್ಯರನ್ನು ಖಾಲಿ ಮಾಡುವವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಮಧುಗಿರಿ ಪಟ್ಟಣದಲ್ಲಿಂದು ತಾಲ್ಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.

      ಈಗಾಗಲೇ ಕೋವಿಡ್-19 ದೇಶದೆಲ್ಲೆಡೆ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ 3ನೇ ಹಂತಕ್ಕೆ ಹೋಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ವೈದ್ಯರುಗಳು ತಮ್ಮ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳನ್ನು ತೆರೆದು ಸ್ಥಳೀಯರಿಗೆ ಅನುಕೂಲವಾಗುವಂತೆ ಸಹಕರಿಸಬೇಕು ಎಂದರು.
ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿರ್ವತಿಸಲಾಗಿದ್ದು, ಕೊರೋನಾ ಶಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಶ್ರೀದೇವಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆಂತಕಪಡುವ ಅಗತ್ಯವಿಲ್ಲ ಎಂದರು.

      ಜಿಲ್ಲಾಸ್ಪತ್ರೆಗೆ ದೂರ ಇರುವ ತಾಲೂಕುಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ 70-80 ವೆಂಟಿಲೇಟರ್‍ಗಳು ಲಭ್ಯವಿದ್ದು, ಅಗತ್ಯವಿರುವ ವೆಂಟಿಲೇಟರ್‍ಗಳನ್ನು ರಾಜ್ಯ ಸರ್ಕಾರವು ಖರೀದಿಸಲು ಮುಂದಾಗಿದೆ. ಇದರ ಜೊತೆಗೆ ಯಾವುದೇ ಕೊರತೆಯಾಗದಂತೆ ಮುನ್ನಚ್ಚರಿಕಾ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ವೈದ್ಯಕೀಯ ಸೇರಿದಂತೆ ಅಗತ್ಯ ವಸ್ತುಗಳ ಸರಕು ಸಾಗಾಟ ವಾಹನಗಳು ಓಡಾಡುತ್ತವೆ ಎಂದರು.

      ಅಗತ್ಯ ಸೇವೆಗಳಾದ ಹಾಲು, ತರಕಾರಿ ವ್ಯಾಪಾರ, ಗೊಬ್ಬರ ಮತ್ತಿತರ ಕೃಷಿ ಚಟುವಟಿಕೆಗಳು, ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ಅಡಚಣೆ ಮಾಡದಂತೆ ಕ್ರಮವಹಿಸಬೇಕು. ಸಾರ್ವಜನಿಕರು ಇಬ್ಬರು ಹೋಗುವ ಬದಲು ಒಬ್ಬರು ಅಂಗಡಿಗೆ ಹೋಗುವುದು. ಹಾಲಿನ ಡೈರಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತರಕಾರಿ/ಪೇಪರ್ ಸಕಾಲಕ್ಕೆ ಹಂಚಿಕೆಯಾಗಬೇಕು. ಸ್ಕೌಡ್ಸ್, ಎನ್‍ಎಸ್‍ಎಸ್, ಸ್ವಯಂಸೇವಕರನ್ನು ಬಳಸಿಕೊಂಡು ಮನೆಯಗಳಿಗೆ ತರಕಾರಿ ಪೂರೈಸಲು ಕ್ರಮ ವಹಿಸಬೇಕು. ಒಟ್ಟಾರೆಯಾಗಿ ಜನರು ಗುಂಪು ಸೇರದಂತೆ ಕ್ರಮವಹಿಸಬೇಕು ಎಂದರು.

      ಸ್ವಯಂ ಸೇವರಕರನ್ನು ನಿಗಧಿಪಡಿಸಿ ಪಡಿತರ ಆಹಾರ ಧಾನ್ಯವನ್ನು ಮನೆ-ಮನೆಗೆ ಸರಬರಾಜು ಮಾಡಬೇಕು. ಆಂಧ್ರಪ್ರದೇಶದಲ್ಲಿ ಎಲ್ಲಾ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದ್ದು, ಸರಕು ಸಾಗಾಟ ವಾಹನಗಳನ್ನು ಪರಿಶೀಲಿಸಿ ಓಡಾಡಲು ಅವಕಾಶನೀಡಿ. ಅವುಗಳಿಗೆ ಯಾವುದೇ ಪಾಸ್ ಇಲ್ಲ ಎಂದರಲ್ಲದೇ ವಾಹನಗಳು ಅಂತರ ಜಿಲ್ಲೆಗೆ ಸರಕು ಸಾಗಾಣೆ ಮಾಡಲು ನೀಡುವಂತೆ ಸೂಚಿಸಿದರು.

      ಔಷಧಿ, ಕ್ಲಿನಿಕ್ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮಾತ್ರ ಆಯಾ ತಾಲೂಕು ತಹಶೀಲ್ದಾರ್ ಅನುಮತಿ ಪಡೆದು ಓಡಾಡಬಹುದು. ಅನುಮತಿ ನೀಡಿದ್ದಾರೆಂದು ದುರುಪಯೋಗ ಮಾಡಿಕೊಂಡರೆ ಶಿಸ್ತು ಕ್ರಮವಹಿಸಲಾಗುವುದು. ಅಲ್ಲದೇ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದ್ದು, ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ಹಾಕುವುದಕ್ಕೂ ಮೊದಲು ಸೂಕ್ತ ಕಾರಣಗಳನ್ನು ನೀಡಿದ ನಂತರ ಪೆಟ್ರೋಲ್ ಹಾಕುವಂತೆ ತಿಳಿಸಬೇಕು. ಸರಕು, ಸಾಗಾಟ ವಾಹನಗಳಿಗೆ ಡೀಸೆಲ್ ಅವಶ್ಯಕತೆಯಿದ್ದು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ಅಂಗನವಾಡಿ ಮತ್ತು ಆಶಾ ಕಾರ್ಯಕತೆಯರನ್ನು ಬಳಸಿಕೊಂಡು ಪ್ರತಿ ಮನೆ-ಮನೆಗೆ ಭೇಟಿ ನೀಡಿ ಸಣ್ಣ ಪುಟ್ಟ ಖಾಯಿಲೆಗಳಿರುವವರ ವಿವರ ಹಾಗೂ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳಿರುವವರ ಮಾಹಿತಿ ಪಡೆಯಬೇಕು. ಅಲ್ಲದೇ ಕೋವಿಡ್-19ರ ಕರಪತ್ರಗಳನ್ನು ನೀಡಿ ಅರಿವಿನ ಮಾಹಿತಿ ನೀಡಬೇಕು. ಪ್ರತಿ ಗ್ರಾಮಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದರಲ್ಲದೇ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕ್ರಮವಹಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು.

      ಪಿಂಚಣಿಯನ್ನು ಸಕಾಲಕ್ಕೆ ನೀಡಿ, ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಿಕೊಂಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ವಲಸೆ ಬಂದಿರುವವರು ಲಾಕ್‍ಡೌನ್ ಇರುವವರೆಗೂ ಎಲ್ಲಿ ಇರುತ್ತಾರೋ, ಅಲ್ಲಿಯೇ ಇರಬೇಕು. ಸರ್ಕಾರದಿಂದ ಅವರಿಗೆ ಊಟದ ವ್ಯವಸ್ಥೆ ಒದಗಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಅಂದರೆ ಮರಣ ಹೊಂದಿದ್ದಲ್ಲಿ 50 ಮಂದಿಗೆ ಪ್ರವೇಶ ಮಾಡಲು ಮಾತ್ರ ಅನುಮತಿ ನೀಡಬೇಕು.

      ಏಪ್ರಿಲ್ 14ರವರೆಗೆ ಶಾಲಾ-ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ ತೆರೆಯುವಂತಿಲ್ಲ. ಅಲ್ಲದೇ ಮದುವೆ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಶಾಸಕ ವೀರಭದ್ರಯ್ಯ, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಡಿಹೆಚ್‍ಓ ಡಾ: ಚಂದ್ರಿಕಾ, ಉಪವಿಭಾಗಾಧಿಕಾರಿ ಡಾ: ನಂದಿನಿದೇವಿ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

      ಮಧುಗಿರಿ ತಾಲ್ಲೂಕಿನ ಭೇಟಿ ಮುನ್ನ ಕೊರಟಗೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಕೊರೋನಾ ನಿಯಂತ್ರಣ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಸಿದ್ಧತೆಗಳನ್ನು ಪರಿಶೀಲಿಸಿ, ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

(Visited 10 times, 1 visits today)