ತುಮಕೂರು:
ತುಮಕೂರು ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿಮಿಟೆಡ್ ಕೋವಿಡ್-19 ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 5ಲಕ್ಷ ಕರಪತ್ರಗಳನ್ನು ಮುದ್ರಿಸಿ ಪ್ರತಿ ಮನೆ-ಮನೆಗೆ ಕರಪತ್ರವನ್ನು ಹಾಗೂ ಎರಡೆರಡು ಸೋಪುಗಳನ್ನು ವಿತರಿಸುವ ಮೂಲಕ ವೈಯಕ್ತಿಕ ಸ್ವಚ್ಛತೆಗೆ ಮತ್ತು ಅರಿವು ಕಾರ್ಯಚಟುವಟಿಕೆಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿಂದು ಕರಪತ್ರ ಮತ್ತು ಸೋಪು ವಿತರಣೆ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಮಾತನಾಡಿದರು. ಸಂಸ್ಥೆಯ ಸಿಎಸ್‍ಆರ್ ನಿಧಿಯಿಂದ ನೀಡಲಾಗುತ್ತಿದೆ. ಕೊರೋನಾವನ್ನು ನಿಯಂತ್ರಿಸುವ ಕುರಿತು 5ಲಕ್ಷ ಕರಪತ್ರ ಮುದ್ರಿಸಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ವಿತರಿಸಲಾಗುವುದು ಹಾಗೂ ಪ್ರತಿ ಮನೆಗೆ 2 ಸೋಪುಗಳು ನೀಡಲಾಗುವುದು ಎಂದರು. ಜಿಲ್ಲೆಯ ಜನತೆ ಕೊರೋನಾ ವೈರಸ್ ಕುರಿತು ಭಯ ಪಡುವುದು ಬೇಡ. ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳಿ ಮತ್ತು ಶುಚಿತ್ವಕ್ಕೆ ಮಹತ್ವ ನೀಡಿ, ಸ್ವರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರಿಗೂ ಈ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಹಿಸಬೇಕೆಂದು ಅವರು ಮನವಿ ಮಾಡಿದರು.
ರೋಗದ ಲಕ್ಷಣಗಳು ಜ್ವರ, ನೆಗಡಿ, ಕೆಮ್ಮು, ತಲೆನೋವು, ಬೇಧಿ, ಉಸಿರಾಟದ ತೊಂದರೆ ಇದ್ದರೆ ಅಂತಹ ವ್ಯಕ್ತಿಗಳು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಲು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಪ್ರೋ ಸಂಸ್ಥೆಯ ತುಮಕೂರು ಘಟಕ ಹಿರಿಯ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಸಿಬ್ಬಂದಿ ವ್ಯವಸ್ಥಾಪಕ ಹನುಮಂತರಾಯಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಉಪ ಕಾರ್ಯದರ್ಶಿ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್, ಮತ್ತಿತರರು ಹಾಜರಿದ್ದರು.
ಕರಪತ್ರ, ಸೋಪು ವಿತರಣೆ :-
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತಾಲ್ಲೂಕು ವೈದ್ಯಾಧಿಕಾರಿಗಳ ಮೂಲಕ ವಿತರಿಸಲಾಗುತ್ತಿರುವ ಕರಪತ್ರ ಮತ್ತು ಸೋಪುಗಳ ವಿವರ ಹೀಗಿದೆ. ತುಮಕೂರು ಕರಪತ್ರ 1ಲಕ್ಷ, ಸೋಪು 1.40ಲಕ್ಷ, ಅದೇ ರೀತಿ ಗುಬ್ಬಿ-ಕರಪತ್ರ 43ಸಾವಿರ, ಸೋಪು 1.17ಲಕ್ಷ, ಚಿಕ್ಕನಾಯಕನಹಳ್ಳಿ- ಕರಪತ್ರ 43ಸಾವಿರ, ಸೋಪು 93ಸಾವಿರ, ಮಧುಗಿರಿ- ಕರಪತ್ರ 50ಸಾವಿರ, ಸೋಪು 1.13ಲಕ್ಷ, ಕೊರಟಗೆರೆ- ಕರಪತ್ರ 43ಸಾವಿರ, ಸೋಪು 69ಸಾವಿರ, ಪಾವಗಡ-ಕರಪತ್ರ 43ಸಾವಿರ, ಸೋಪು 1ಲಕ್ಷ, ಕುಣಿಗಲ್-ಕರಪತ್ರ 43ಸಾವಿರ, ಸೋಪು 90ಸಾವಿರ, ಶಿರಾ-ಕರಪತ್ರ 50ಸಾವಿರ, ಸೋಪು 1.16ಲಕ್ಷ, ತುರುವೇಕೆರೆ-ಕರಪತ್ರ 42ಸಾವಿರ, ಸೋಪು 73ಸಾವಿರ, ತಿಪಟೂರು-ಕರಪತ್ರ 43ಸಾವಿರ, ಸೋಪು 89ಸಾವಿರ ಸೇರಿ ಒಟ್ಟು 5ಲಕ್ಷ ಕರಪತ್ರ, 10ಲಕ್ಷ ಸೋಪುಗಳನ್ನು ವಿತರಿಸಲಾಗುತ್ತದೆ.