ತುಮಕೂರು :

      ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಿರ್ಗತಿಕರು, ಬಡವರು, ಕೂಲಿಕಾರ್ಮಿಕರಿಗೆ ನೀಡಲು ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ನಗರದ ಮಂಡಿಪೇಟೆಯಲ್ಲಿಂದು ವರ್ತಕರಿಂದ ದಿನಸಿ ಪದಾರ್ಥಗಳನ್ನು ಸಂಗ್ರಹ ಮಾಡಲಾಯಿತು.

      ಶಾಸಕ ಜ್ಯೋತಿಗಣೇಶ್ ಅವರು ಮಂಡಿಪೇಟೆಯ ಪ್ರತಿ ಅಂಗಡಿ ಮಳಿಗೆಗೆ ಖುದ್ದಾಗಿ ಭೇಟಿ ನೀಡಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ನೀಡಬೇಕೆಂದು ವರ್ತಕರಲ್ಲಿ ಮನವಿ ಮಾಡಿ ಮಾತನಾಡುತ್ತಾ, ವರ್ತಕರೆಲ್ಲಾ ತುಂಬು ಹೃದಯದಿಂದ ದಿನಸಿ ಪದಾರ್ಥಗಳನ್ನು ನೀಡಲು ಮುಂದೆ ಬಂದಿದ್ದು, ಸಂಗ್ರಹಿಸಿದ ದಿನಸಿಯನ್ನು ಕ್ರೋಢಿಕರಿಸಿ ಅರ್ಹರಿಗೆ ವಿತರಿಸಲಾಗುವುದು ಎಂದು ತಿಳಿಸಿದರಲ್ಲದೆ, ಧನ ಸಹಾಯ ಮಾಡಲಿಚ್ಛಿಸುವವರು ಜಿಲ್ಲಾಡಳಿತ/ ಮುಖ್ಯಮಂತ್ರಿಗಳ ಪರಿಹಾರ ನಿಧಿ/ ಪಿಎಂ ಕೇರ್ ನಿಧಿಗೆ ಸಂದಾಯ ಮಾಡಬಹುದಾಗಿದೆ ಎಂದು ಮನವಿ ಮಾಡಿದರು. 

      ನಗರದ ವೀರಶೈವ ಕಲ್ಯಾಣ ಮಂಟಪ, ಅಯ್ಯಪ್ಪಸ್ವಾಮಿ ಮಂದಿರ, ಶಂಕರಮಠ, ಬ್ರಾಹ್ಮಣರ ವಸತಿ ನಿಲಯ ಮತ್ತಿತರ ಕಡೆ ದಾನಿಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳನ್ನು ಬಳಸಿ ತಯಾರಿಸಿದ ಊಟವನ್ನು ನಿರ್ಗತಿಕರು/ ಕೂಲಿ ಕಾರ್ಮಿಕರಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

      ಸಮಾಜ ಸೇವಕ ಶ್ರೀ ಭಗವಾನ್ ರೈಸ್ ಇಂಡಸ್ಟ್ರೀಸ್‍ನ ರಮೇಶ್ ಬಾಬು ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಇಂತಹ ಕಾರ್ಯಕ್ಕೆ ವರ್ತಕರು ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ನೀಡಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

      ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ವರ್ತಕರಿಗೆ ದಿನಸಿ ಪದಾರ್ಥಗಳ ನೆರವು ನೀಡುವ ಮನೋಭಾವವಿದ್ದರೂ, ಹೇಗೆ ನೀಡಬೇಕೆಂಬ ಮಾರ್ಗ ತಿಳಿದಿರಲಿಲ್ಲ. ಇಂದು ಶಾಸಕರೇ ಖುದ್ದಾಗಿ ಅಂಗಡಿ ಮಾಲೀಕರನ್ನು ಭೇಟಿ ಮಾಡಿ ದಿನಸಿ ಪದಾರ್ಥಗಳನ್ನು ನಿರ್ಗತಿಕರಿಗೆ ಹೇಗೆ ತಲುಪಿಸಬೇಕೆಂಬ ಮಾಹಿತಿಯನ್ನು ನೀಡಲಾಗಿದೆ. ಈ ನೆರವಿನ ಕಾರ್ಯದಲ್ಲಿ ಹಲವಾರು ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡಲಿಚ್ಛಿಸುವವರು ಜಿಲ್ಲಾಡಳಿತವನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್, ಸಮಾಜ ಸೇವಕರು, ಸ್ವಯಂ ಸೇವಕರು, ವರ್ತಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 9 times, 1 visits today)