ತುಮಕೂರು:
ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ದಿಢೀರ್ ದಾಳಿ ನಡೆಸಿ ಎರಡು ಅಂಗಡಿಗಳಿಗೂ ಬೀಗ ಹಾಕಿಸಿರುವ ಘಟನೆ ನಗರದಲ್ಲಿಂದು ನಡೆದಿದೆ.
ನಗರದ ಕೋತಿತೋಪು ಸೇರಿದಂತೆ ವಿವಿಧೆಡೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಟನ್ ಮತ್ತು ಚಿಕನ್ ಮಾರಾಟ ಮಾಡಲಾಗುತ್ತಿದೆ ಎಂಬ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಟಿ. ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ಅವರು ಇಂದು ಕೋತಿತೋಪಿನ ಎರಡು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದಾಗ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ತಕ್ಷಣ ಆಯುಕ್ತರು ಒಂದು ಮಾಂಸದ ಅಂಗಡಿ ಮತ್ತು ಒಂದು ಕೋಳಿ ಅಂಗಡಿ ಸೇರಿ ಎರಡೂ ಅಂಗಡಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಅಂಗಡಿಗಳ ಬಾಗಿಲು ಮುಚ್ಚಿಸಿ ಬೀಗ ಹಾಕಿಸಿದರು.
ನಂತರ ಮಾತನಾಡಿದ ಆಯುಕ್ತರು, ಮಹಾನಗರ ವ್ಯಾಪ್ತಿಯಲ್ಲಿರುವ ಮಟನ್ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಅಂದರೆ 500 ರೂ. ಕೆ.ಜಿ. ಮಾಂಸ ಮಾರಾಟ ಮಾಡುವುದನ್ನು ಬಿಟ್ಟು 700-800 ರೂ.ಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿ ಈ ಅಂಗಡಿಗಳಿಗೆ ಬೀಗ ಜಡಿದಿರುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ನಿಗದಿತ ದರಕ್ಕಿಂತ ಜಾಸ್ತಿ ಬೆಲೆಗೆ ಮಾಂಸ ಮತ್ತು ಕೋಳಿ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಮುಂದಿನ 1 ವರ್ಷಕ್ಕೆ ಅಂತಹ ಅಂಗಡಿಗಳ ಉದ್ದಿಮ ಪರವಾನಿಗೆ ರದ್ದುಪಡಿಸಲಾಗುವುದು. ಯಾವುದೇ ಕಾರಣಕ್ಕೂ ಅಂತಹವರಿಗೆ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದರು.
ಇದೇ ರೀತಿ ದಿನಸಿ, ತರಕಾರಿ, ಮೀನು ಅಂಗಡಿಗಳಲ್ಲಿಯೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರ ಬಗ್ಗೆ ದೂರುಗಳು ಬಂದರೆ ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಬಾಗಿಲು ಮುಚ್ಚಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
ವರ್ತಕರು, ವ್ಯಾಪಾರಸ್ಥರು ಹಾಗೂ ಅಂಗಡಿಗಳ ಮಾಲೀಕರು ದುರಾಸೆಗೆ ಬಿದ್ದು ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ಉದ್ದಿಮೆ ಪರವಾನಗಿಯನ್ನು ರದ್ದು ಮಾಡಲಾಗುವುದು. ಜತೆಗೆ ಪ್ರತಿಯೊಬ್ಬರೂ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ಸೂಚನೆ ನೀಡಿದರು.