ತುಮಕೂರು:

      ಶಿರಾ ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾ ಸಾರ್ವಜನಿಕ ಆಸ್ಪತ್ರೆ ಹಾಗೂ ಶಿರಾ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 2 ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಬಿ.ಆರ್. ಚಂದ್ರಿಕಾ ತಿಳಿಸಿದರು.

      ತಮ್ಮ ಕಛೇರಿಯಲ್ಲಿಂದು ಮಾಹಿತಿ ನೀಡಿದ ಅವರು, ಕೊರೋನಾ ಸೋಂಕಿತ ಮೃತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವೆಂದು ಘೋಷಿಸಿದ್ದು, ಈ ವಲಯದ ಮನೆಗಳನ್ನು ಪ್ರತಿದಿನ ಆರೋಗ್ಯ ಸಿಬ್ಬಂದಿಗಳು ಸಮೀಕ್ಷೆ ಮಾಡುತ್ತಿದ್ದಾರೆ. ಜ್ವರ, ತಲೆನೋವು, ಕೆಮ್ಮು, ನೆಗಡಿ ಮತ್ತಿತರ ಕೊರೋನಾ ವೈರಸ್ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಫೀವರ್ ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ಕಳುಹಿಸಲಾಗುವುದು. ಯಾವುದೇ ತೊಂದರೆ ಇಲ್ಲವೆಂದು ದೃಢಪಟ್ಟಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುವುದು. ಜ್ವರ ಕಡಿಮೆಯಾಗದೆ ಕೆಮ್ಮಿನಿಂದ ಬಳಲುತ್ತಿದ್ದು ಸಂದೇಹ ಬಂದರೆ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ಇಡಲಾಗುವುದು ಎಂದು ತಿಳಿಸಿದರು.

      ಆರೋಗ್ಯ ಸಿಬ್ಬಂದಿಗಳಿಗೆ ಪ್ರತಿದಿನ ದೂರವಾಣಿ ಕರೆ, ವಿಡಿಯೋ ಹಾಗೂ ಝೂಮ್ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇವರು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಕೊರೋನಾ ವೈರಸ್ ಹರಡುವ ಹಾಗೂ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಸಂಚಾರಿ ವಾಹನದ ಮೂಲಕ ಜಿಲ್ಲಾದ್ಯಂತ ಅರಿವು ಮೂಡಿಸಲಾಗುತ್ತಿದೆ. ಎಲ್‍ಇಡಿ ಪರದೆ ಮೇಲೆ ಜಾಗೃತಿ ಸಂದೇಶ, ಫ್ಲೆಕ್ಸ್ ಅಳವಡಿಕೆ, ಹೋರ್ಡಿಂಗ್ಸ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

      ಭಾರತೀಯ ವೈದ್ಯಕೀಯ ಸಂಘ(ಐಎಂಎ)ದವರು ಸಹ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದೆ. ಪ್ರಾರಂಭದಲ್ಲಿ ಖಾಸಗಿ ಕ್ಲಿನಿಕ್/ಆಸ್ಪತ್ರೆಗಳು ತೆರೆಯಲು ಹಿಂಜರಿದಿದ್ದವು. ಅವರಿಗೂ ಸಹ ಆಸ್ಪತ್ರೆಗಳನ್ನು ತೆರೆಯಲು ಅರಿವು ಮೂಡಿಸಲಾಗುತ್ತಿದೆ. ಖಾಸಗಿ ಕ್ಲಿನಿಕ್/ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ 65 ವರ್ಷ ಮೇಲ್ಪಟ್ಟ ಮಧುಮೇಹ-ರಕ್ತದೊತ್ತಡ-ಮೂತ್ರಪಿಂಡ-ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ವೈದ್ಯರಿಗೆ ವಿನಾಯತಿ ನೀಡಲಾಗಿದೆ. ಉಳಿದಂತೆ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ ಅಂತಹವರ ಕ್ಲಿನಿಕ್‍ಗಳನ್ನು ಮುಚ್ಚಿಸಲಾಗುತ್ತಿದೆ. ಕ್ಲಿನಿಕ್‍ಗಳನ್ನು ಮುಚ್ಚಿಸುತ್ತಿರುವುದರಿಂದ ನಕಲಿ ವೈದ್ಯರು ತಮ್ಮ ಮನೆಗಳಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಗುರುತಿಸಲಾಗಿರುವ 480 ಮಂದಿ ಪ್ರಯಾಣಿಕರನ್ನು ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿದೆ. ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 8, ಗುಬ್ಬಿಯ 7, ಕೊರಟಗೆರೆ-2, ಕುಣಿಗಲ್-14, ಮಧುಗಿರಿ-5, ಪಾವಗಡ-18, ಶಿರಾ-11, ತಿಪಟೂರು-11, ತುಮಕೂರು-173 ಹಾಗೂ ತುರುವೇಕೆರೆ ತಾಲ್ಲೂಕಿನ 14 ಸೇರಿದಂತೆ ಒಟ್ಟು 263 ಜನರು ಕ್ವಾರೆಂಟೈನ್ (28 ದಿನಗಳನ್ನು ಪೂರ್ಣಗೊಳಿಸಿರುವ ಹೋಂ ಕ್ವಾರೆಂಟೈನ್) ಅವಧಿಯಲ್ಲಿದ್ದಾರೆ. ಅಲ್ಲದೆ ದೆಹಲಿಯ ತಬ್ಲಿಘ್ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದಿರುವ ಸೋಂಕಿತ ಮೃತ ವ್ಯಕ್ತಿಯ ಸಹ ಪ್ರಯಾಣಿಕರು ಸೇರಿದಂತೆ ಒಟ್ಟು 18 ಮಂದಿಯನ್ನು ಸಹ ನಿಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

      ಶಿರಾ ತಾಲ್ಲೂಕಿನಲ್ಲಿ ಮೃತಪಟ್ಟ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಹಾಗೂ ಆತನ ಮಗನನ್ನು ಹೊರತುಪಡಿಸಿ ಯಾವುದೇ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿಲ್ಲ. ದೆಹಲಿಗೆ ಹೋಗಿ ಬಂದಿದ್ದ ಮೃತ ವ್ಯಕ್ತಿಯ ಸಹ ಪ್ರಯಾಣಿಕರು ಹಾಗೂ ಆತನ ಸಂಪರ್ಕದಲ್ಲಿದ್ದವರನೆಲ್ಲಾ ಪರೀಕ್ಷೆಗೊಳಪಡಿಸಿದ್ದು ಎಲ್ಲರದೂ ನೆಗೆಟಿವ್ ವರದಿ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಸಹ ಪ್ರಯಾಣಿಕರನ್ನೆಲ್ಲಾ 28 ದಿನಗಳು ಅವಧಿ ಮುಗಿಯುವವರೆಗೂ ಐಸೋಲೇಷನ್‍ನಲ್ಲಿಡಲಾಗಿದೆ. ಮೃತನ ಪತ್ನಿ ಹಾಗೂ ನಿಗಾವಣೆಯಲ್ಲಿರುವ ಎಲ್ಲಾ ಶಂಕಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

(Visited 10 times, 1 visits today)