ತುಮಕೂರು :
ಕೋವಿಡ್-19ರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಿಂದ ರಾಜ್ಯದೊಳಗಡೆ ಹುಣಸೆಹಣ್ಣು ಮತ್ತು ಕೊಬ್ಬರಿಯ ಮಾರಾಟಕ್ಕೆ ಅವಕಾಶವಿದೆ. ಆದರೆ ಹೊರ ರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಕೋವಿಡ್-19ರ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಗೆ ಕೊಬ್ಬರಿ ಮತ್ತು ಹುಣಸೆಹಣ್ಣನ್ನು ಜಿಲ್ಲೆಯಿಂದ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ನಮ್ಮ ರಾಜ್ಯದೊಳಗೆ ವ್ಯಾಪಾರ ಮಾಡಿಕೊಳ್ಳಲಿ ಎಂದು ಅವರು ತಿಳಿಸಿದರು.
ಪಾವಗಡ, ಶಿರಾ ತಾಲ್ಲೂಕಿನಲ್ಲಿ ಹಾಲಿಗೆ ಬೇಡಿಕೆ ಬಂದಿದ್ದು, ಸರ್ಕಾರದ ವತಿಯಿಂದ ಕೊಳಚೆ ಪ್ರದೇಶದ ನಿವಾಸಿಗಳು, ಬಡವರಿಗೆ ನೀಡುತ್ತಿರುವ ಹಾಲನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಕುಣಿಗಲ್ ಮತ್ತು ತುರುವೇಕೆರೆ ಸೇರಿದಂತೆ ಜಿಲ್ಲೆಯ ಕೆಲ ಭಾಗದಲ್ಲಿ ಮೀನಿನ ಪೂರೈಕೆ ಇದೆ. ಈ ಭಾಗದಿಂದ ಜಿಲ್ಲೆಯ ಇತರೆ ಭಾಗಕ್ಕೆ ಸಾಗಾಟ ಮಾಡಲು ಅಡ್ಡಿಪಡಿಸುವುದು ಬೇಡ. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ, ಟ್ರಾನ್ಸ್‍ಫರ್‍ಗಳ ವೈಫಲ್ಯತೆ(ಪೈಲೂರ್) ಉಂಟಾಗುತ್ತಿವೆ. ಜಿಲ್ಲೆಯಲ್ಲಿ ಹೊಸ ಟ್ರಾನ್ಸ್‍ಫರ್‍ಗಳು ಅಳವಡಿಕೆ ಮಾಡಿ ಎಂದು ಸಚಿವರು ಬೆಸ್ಕಾಂನ ಇಂಜಿನಿಯರ್‍ಗೆ ಸೂಚಿಸಿದರು.
ಕೋವಿಡ್-19ರ ನಿಯಂತ್ರಣ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ನಿಯಂತ್ರಣ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಸಚಿವರಿಗೆ ವಿವರಿಸಿದರು.
ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ, ಡಿಹೆಚ್‍ಓ ಡಾ: ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.