ತುಮಕೂರು :
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಬಾಲಮಂದಿರಗಳಲ್ಲಿ ಇರುವ ಮಕ್ಕಳನ್ನು ಚಟುವಟಿಕೆಯಿಂದಿಡಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ನಿರ್ದೇಶಕರ ಆದೇಶದ ಮೇರೆಗೆ ತುಮಕೂರಿನ ಬಾಲಮಂದಿರದಲ್ಲಿರುವ ಬಾಲಕಿಯರಿಗೆ ಮತ್ತು ಬಾಲಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಏಪ್ರಿಲ್ 15ರಂದು 6-12ವರ್ಷ ಹಾಗೂ 13-18ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ 2 ಗುಂಪುಗಳನ್ನು ಮಾಡಿ ಬಾಲಮಂದಿರದಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 6-12 ವರ್ಷದ ಬಾಲಕಿಯರಲ್ಲಿ ಕು|| ಅಪ್ಸನಾ (ಪ್ರಥಮ), ಕು|| ರೇಷ್ಮಾ (ದ್ವಿತೀಯ), ಕು|| ಸಂಧ್ಯಾ (ತೃತೀಯ) ಸ್ಥಾನಗಳನ್ನು, 13 ರಿಂದ 18ವರ್ಷದ ಗುಂಪಿನಲ್ಲಿ ಬಾಲಕಿಯರಲ್ಲಿ ಕು|| ಅರ್ಪಿತಾ (ಪ್ರಥಮ), ಕು|| ಕಲ್ಪನಾ (ದ್ವಿತೀಯ), ಕು|| ಸುಶ್ಮಿತಾ (ತೃತೀಯ) ಸ್ಥಾನಗಳನ್ನು ಪಡೆದಿರುತ್ತಾರೆ. ಬಾಲಕರ ಬಾಲಮಂದಿರದಿಂದ ಕು|| ಅಜಯ್ (ಪ್ರಥಮ), ಕು|| ಅಭಿ (ದ್ವಿತೀಯ), ಕು|| ಸಂತೋಷ್ (ತೃತೀಯ) ಸ್ಥಾನಗಳನ್ನು, ಕು|| ವೀರಭದ್ರ (ಪ್ರಥಮ), ಕು|| ಆನಂದ (ದ್ವಿತೀಯ), ಕು|| ಬೀರೇಶ್ (ತೃತೀಯ) ಸ್ಥಾನಗಳನ್ನು ಪಡೆದಿರುತ್ತಾರೆ ಮತ್ತು ಚಿತ್ರಕಲೆ, ಪಿಕ್ ಅಂಡ್ ಆಕ್ಟ್, ಪಿಕ್ ಅಂಡ್ ಸ್ಪೀಕ್, ಕಥೆ ಬರೆಯುವುದು, ಹಾಡು ಹೇಳುವುದು, ಭಾಷಣ, ಕವನ ಬರೆಯುವುದು, ವಚನಗಳು ಹಾಗೂ ಗಾದೆ ಮಾತುಗಳನ್ನು ಹೇಳುವುದು ಈ ಸ್ಪರ್ಧೆಗಳನ್ನು ಪ್ರತೀ ಎರಡು ದಿನಕ್ಕೊಮ್ಮೆ ಆಯೋಜಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಮಂದಿರಕ್ಕೆ ಪಾಲಿಕೆ ಆಯುಕ್ತರ ಭೇಟಿ :
ತುಮಕೂರು ಮಹಾನಗರಪಾಲಿಕೆಯ ಆಯುಕ್ತರಾದ ಟಿ.ಭೂಬಾಲನ್ ಅವರು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಏಪ್ರಿಲ್ 15ರಂದು ಭೇಟಿ ನೀಡಿ ಸಂಸ್ಥೆಯಲ್ಲಿ ಕೋವಿಡ್-19ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಕ್ಕಳಿಗೆ ಒದಗಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು. ಮಕ್ಕಳಿಗೆ ಸರಿಯಾಗಿ ಕೈತೊಳೆಯುವ ವಿಧಾನವನ್ನು, ಮುಖ ಗವಸು(ಮಾಸ್ಕ್)ಗಳನ್ನು ಧರಿಸುವ ಬಗ್ಗೆ ಸ್ವತಃ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯ ಚಿತ್ರಗಳನ್ನು ನೋಡಿ ಮಕ್ಕಳನ್ನು ಚಟುವಟಿಕೆಯಿಂದ ಇಟ್ಟಿರುವ ಬಗ್ಗೆ ಬಾಲ ಮಂದಿರದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ: ನಾಗೇಶ್ ಕುಮಾರ್, ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸಂಸ್ಥೆಯ ಅಧೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.