ತುಮಕೂರು:
ಸೂರತ್ನಿಂದ ತುಮಕೂರಿನ ಮಸೀದಿಗೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದ 14 ಜನರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಪತ್ತೆಯಾಗಿರುವ ಕೋವಿಡ್-19 ಸೋಂಕು ಪೀಡಿತ ವ್ಯಕ್ತಿ ಮೂಲತಃ ತುಮಕೂರು ಜಿಲ್ಲೆಗೆ ಸೇರಿದವನಲ್ಲ. ಬದಲಾಗಿ ಗುಜರಾತ್ ರಾಜ್ಯದ ಸೂರತ್ ಮೂಲದವ. ಮಾ. 12ರಂದೇ ನಗರಕ್ಕೆ ಬಂದಿದ್ದರು. ಒಟ್ಟು 14 ಮಂದಿ ಸೂರತ್ನಿಂದ ತುಮಕೂರಿನ ಮಸೀದಿಗೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದರು. ಪಿ.ಹೆಚ್. ಕಾಲೋನಿಯಲ್ಲಿರುವ ಮಸೀದಿಯಲ್ಲಿ ತಂಗಿದ್ದರು. ಇಡೀ ದೇಶದಲ್ಲಿ ಲಾಕ್ಡೌನ್ ಘೋಷಣೆ ಆದ ನಂತರ ವಾಪಸ್ ಸೂರತ್ ಹೋಗಲು ಆಗಿರಲಿಲ್ಲ. ಹೀಗಾಗಿ ಮಸೀದಿಯಲ್ಲಿಯೇ ಉಳಿದುಕೊಂಡಿದ್ದರು.
ಕಳೆದ ರಾತ್ರಿ ಈತನನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವ್ಯಕ್ತಿಯನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ.
ಇನ್ನು ಈತನ ಜೊತೆಯಲ್ಲಿದ್ದ ಉಳಿದ 13 ಮಂದಿಯನ್ನ ಮಸಿದಿಯಲ್ಲೆ ಕ್ವಾರೆಂಟೈನ್ ಮಾಡಲಾಗಿದೆ. ಪಿ.ಎಚ್. ಕಾಲೋನಿಯ ನಿಮ್ರಾ ಮಸೀದಿ ಸುತ್ತ 150 ಮೀಟರ್ ಸೀಲ್‌ಡೌನ್ ಮಾಡಲಾಗಿದೆ. ಎಲ್ಲಾ ಸಂಪರ್ಕ ರಸ್ತೆಗಳನ್ನ ಕಬ್ಬಿಣದ ಶೀಟ್ ಗಳಿಂದ ಬಂದ್ ಮಾಡಲಾಗಿದೆ.
ಮಸೀದಿಯ ಸುತ್ತಲು 150 ಮೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಜನರು ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ಎಲ್ಲರನ್ನ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜನರಿಗೆ ಬೇಕಾದ ಅಗತ್ಯ ದಿನಸಿ ವಸ್ತುಗಳು ಮನೆಬಾಗಿಲಿಗೆ ಬರುತ್ತದೆ ದಯವಿಟ್ಟು ಮನೆ ಬಾಗಿಲಿಗೆ ಬರಬೇಡಿ ಎಂದು ಪೋಲಿಸರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಹೊರ ರಾಜ್ಯದಿಂದ ತುಮಕೂರು ಜಿಲ್ಲೆಗೆ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಸೂರತ್ ಮೂಲದ ವ್ಯಕ್ತಿಯಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್ , ತಹಸಿಲ್ದಾರ್ ಮೋಹನ್ ಕುಮಾರ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿ ಸೀಲ್ ಡೌನ್ ಗೆ ಸಂಬಂದಿಸಿದಂತೆ ಪರಿಶೀಲನೆ ನಡೆಸಿದ್ದಾರೆ.