ಬುಕ್ಕಾಪಟ್ಟಣ :
ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಿ ಏರುಪೇರಾಗಿ ಹಣ್ಣು-ತರಕಾರಿ ಬೆಳೆದ ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಲು ಸಾಧ್ಯವಾಗದೆ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬುಕ್ಕಾಪಟ್ಟಣದ ಬಂಗಾರಿಹಟ್ಟಿಯ ಕೃಷಿಕ ತಮ್ಮಣ್ಣ ಸೇರಿದಂತೆ ಹಲವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ಟೊಮೆಟೊವನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗದೆ ಜಮೀನಿನಲ್ಲೇ ಬಿಟ್ಟು ನಷ್ಟ ಉಂಟಾಗಿತ್ತು.
ರೈತನ ಸಮಸ್ಯೆ ಬಗ್ಗೆ ಅರಿತ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಪೂರಾ ಬೆಳೆಯನ್ನು ಹಣಕೊಟ್ಟು ಖರೀದಿಸಿ ತಮ್ಮ ಕಾರ್ಯಕರ್ತರ ಮೂಲಕ ಹುಳಿಯಾರು ಸೇರಿದಂತೆ ಅನೇಕ ಕಡೆ ಉಚಿತವಾಗಿ ಹಂಚಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ರೈತರು ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿರುವ ಬಗ್ಗೆ ಸರ್ಕಾರ ವಿವರ ತರಿಸಿಕೊಂಡು ನಷ್ಟ ಭರಿಸಬೇಕು. ಆ ಮೂಲಕ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.