ತುಮಕೂರು :
ಕೋವಿಡ್-19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮೊದಲ ಬಾರಿಗೆ ರೈತನ ಮನೆ ಬಾಗಿಲಿಗೇ ಬೀಜಗಳನ್ನು ಪೂರೈಸುವ ಕಾರ್ಯಕ್ಕೆ ಮುಂದಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ರೈತರು ಊರುಗಳಲ್ಲೇ ಲಾಕ್ ಡೌನ್ ಆಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಾಗಲು ವಿ.ವಿ ಯು ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಗೆ ಅಂತಿಮ ರೂಪ ನೀಡಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗುತ್ತಿದೆ.
ಏಕೆ ಈ ವ್ಯವಸ್ಥೆ :
ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳೂ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದರೂ ಬಿತ್ತನೆ ಬೀಜ ತರಲು ಸ್ವಂತ ವಾಹನದಲ್ಲಿ ಹೋಗಲು ಹೆಚ್ಚಿನವರ ಬಳಿ ವಾಹನಗಳಿಲ್ಲ ಬಾಡಿಗೆ ವಾಹನಗಳೂ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ನೆರವಾಗಲು ಬಿತ್ತನೆ ಬೀಜಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಿದೆ.
ಬೀಜ ಪೂರೈಕೆ ಹೇಗೆ :
ವಿವಿ ಯಿಂದ ಬೀಜ ಪೂರೈಕೆಯಾಗಬೇಕಿದ್ದಲ್ಲಿ ಗ್ರಾಮದವರೆಲ್ಲ ಸೇರಿ ಬೇಕಾದ ಬೀಜಗಳ ಬಗ್ಗೆ ಕನಿಷ್ಠ 8-10 ಕ್ವಿಂಟಾಲ್ ಬೇಡಿಕೆ ಸಲ್ಲಿಸಬೇಕು. ಹತ್ತಿರದ ಗ್ರಾಮಗಳ ರೈತರನ್ನಾದರೂ ಸೇರಿಸಿಕೊಂಡು ಪ್ರಸ್ತಾವನೆ ಸಲ್ಲಿಸಬಹುದು. ಈ ಮಾಹಿತಿ ತಲುಪಿಸಿದ ಸಮಯದಲ್ಲೇ ಬಿತ್ತನೆ ಬೀಜದ ಬಿಲ್ ಪಾವತಿಸಬೇಕು. ಆಯಾ ಬೆಳೆಗಳ ಹೆಸರು, ತಳಿ, ಬೀಜದ ಪ್ರಮಾಣ, ತಲುಪಿಸಬೇಕಾದ ಸ್ಥಳದ ಮಾಹಿತಿ ನೀಡಿದ 3-4 ದಿನಗಳಲ್ಲಿ ಮನೆ ಬಾಗಿಲಿಗೆ ಬೀಜ ಪೂರೈಸಲಾಗುತ್ತದೆ. ಹೀಗಾಗಿ ಸರ್ಕಾರ ನೀಡುವ ರಿಯಾಯಿತಿ ವಿವಿಯ ಬಿತ್ತನೆ ಬೀಜಕ್ಕೆ ಸಿಗದು.
ಪೂರೈಕೆಯಾಗುವ ಜಿಲ್ಲೆಗಳು:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ವಿ.ವಿ.ವಾಹನದಲ್ಲೆ ರೈತನಿರುವೆಡೆ ಬೀಜ ಪೂರೈಕೆ ಮಾಡಲಾಗುವುದು.
ಲಭ್ಯವಿರುವ ಬೆಳೆಗಳ ಬಿತ್ತನೆ ಬೀಜ: ಭತ್ತ;ಬಿ.ಆರ್-2655, ಐ.ಆರ್-65, ಕೆ.ಆರ್.ಹೆಚ್-4, ತನುರಾಗಿ: ಎಂ.ಎಲ್-365, ಜಿ.ಪಿಯು-28, 48, ಎಂ.ಆರ್-6, ತೊಗರಿ: ಬಿ.ಆರ್.ಜಿ-1,2,4,5, ಸೂರ್ಯಕಾಂತಿ: ಕೆ.ಬಿ.ಎಸ.ಹೆಚ್.-41, 44, 53, 78, ಅವರೆ: ಹೆಚ್.ಎ-3,4, ಸಿರಿಧಾನ್ಯ: ನವಣೆ, ಸಾಮೆ, ಹಾರಕ.
ಲಭ್ಯವಿರುವ ಬೆಳೆಗಳ ಬಿತ್ತನೆ ಬೀಜಗಳಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ದೂರವಾಣಿ: 080-23620494, 9972842642ಗೆ ಸಂಪರ್ಕಿಸಿ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ.ಗೋವಿಂದಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.