ತುಮಕೂರು:

      ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಸುಬಾಹು” ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ/ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ಚಾಲಕರು ಸಂಚರಿಸಿಸಬಹುದಾದ ಸ್ಥಳ ಹಾಗೂ ಉದ್ದೇಶಗಳನ್ನು ನಮೂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಅವರು ತಿಳಿಸಿದ್ದಾರೆ.

      ತುಮಕೂರು ಜಿಲ್ಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ತೆರೆದಿರುವ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ “ಸುಬಾಹು” ಆ್ಯಪ್ ಅನ್ನು ಅಳವಡಿಸಲಾಗಿದೆ. ತುಮಕೂರಿನ ಎಲ್ಲಾ ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಇದನ್ನು ಬಳಸಬಹುದಾಗಿದೆ. ಪೊಲೀಸ್ ಸಿಬ್ಬಂದಿಯು ಈ ಆ್ಯಪ್ ಮೂಲಕ ವಾಹನಗಳ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ, ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬುದು ಅಪ್‍ಲೋಡ್ ಮಾಡಲಾಗುವುದು. ಈ ವಿವರಗಳನ್ನು ಜಿಲ್ಲೆಯ ಎಲ್ಲಾ ಚೆಕ್ ಪಾಯಿಂಟ್‍ಗಳಲ್ಲಿ ಎಲ್ಲಿ ಬೇಕಾದರೂ ಪರಿಶೀಲನೆ ಮಾಡಬಹುದು. ದಿನದಲ್ಲಿ ಎಷ್ಟು ವಾಹನಗಳು ಯಾವ ಕಾರಣಕ್ಕೆ ಸಂಚರಿಸಿವೆ ಎಂಬುದು ತಿಳಿಯುತ್ತದೆ.

      ಇದರಿಂದ ಅನವಶ್ಯಕವಾಗಿ ಓಡಾಡುವ ವಾಹನ ಪ್ರಯಾಣಿಕರು ಹಾಗೂ ಚಾಲಕರನ್ನು ಸುಲಭವಾಗಿ ಪತ್ತೆ ಮಾಡಬಹುದು. ಯಾವುದಾದರೂ ವಾಹನಗಳು ವಿನಾ ಕಾರಣ ಅನಾವಶವ್ಯಕವಾಗಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

(Visited 13 times, 1 visits today)