ತುಮಕೂರು:
ಕೊರೋನಾ ವೈರಸ್(ಕೋವಿಡ್-19) ಸೋಂಕು ರೋಗ ಹರಡದಂತೆ ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 4 ರಿಂದ 17ರವರೆಗೆ ಜಿಲ್ಲಾದ್ಯಂತ ಕಲಂ 144ರನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಇಂದು ಆದೇಶ ಹೊರಡಿಸಿದ್ದಾರೆ.
ನಿಷೇಧಾವಧಿಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕ ಸಾರಿಗೆ ಸಂಪರ್ಕ, ಧಾರ್ಮಿಕ ಕೇಂದ್ರ/ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಪೂಜಾ ಕೈಂಕರ್ಯ ಹೊರತುಪಡಿಸಿ ಎಲ್ಲಾ ಸಾಮೂಹಿಕ ಸೇವೆ, ಜಿಲ್ಲೆಯಲ್ಲಿ ನಡೆಯುವ ಜಾತ್ರೆ/ ಉತ್ಸವ/ ಸಂತೆ/ ಮತ್ತಿತರ ಜನಸಂದಣಿ ಸೇರುವಂತಹ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಜಿಲ್ಲೆಯಾದ್ಯಂತ ಚಿತ್ರಮಂದಿರ/ ನೈಟ್‍ಕ್ಲಬ್/ ನಾಟಕ ಪ್ರದರ್ಶನ/ ಶಾಪಿಂಗ್ ಮಾಲ್‍ಗಳನ್ನು ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸಂಶೋಧನೆ, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚುವಂತೆ ಆದೇಶಿಸಲಾಗಿದ್ದು, ಸರ್ಕಾರಿ ಸಮಾರಂಭಗಳಲ್ಲಿ ಜನದಟ್ಟಣೆ ಸೇರುವಂತಹ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ರೀತಿಯ ಸಾಮಾಜಿಕ/ ರಾಜಕೀಯ/ಕ್ರೀಡೆ/ ಮನರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.
ನಿಷೇಧಾಜ್ಞೆಯನ್ವಯ ರಸ್ತೆ ಬದಿ ಅಥವಾ ಇನ್ನಿತರ ಸಾರ್ವಜನಿಕ ಪ್ರದೇಶದ ತೆರೆದ ಸ್ಥಳಗಳಲ್ಲಿ ಯಾವುದೇ ತರಹದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ದೇವರ ಸೇವೆ ರೂಪದಲ್ಲಿ ನಡೆಸುವ ಸಾಮೂಹಿಕ ಭೋಜನ ಕಾರ್ಯಕ್ರಮವನ್ನು ಸಹ ರದ್ದುಪಡಿಸಲಾಗಿದೆ. ದೇವಸ್ಥಾನ/ ಮಸೀದಿ/ ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಬರುವ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿದೆ.
ಜಿಲ್ಲೆಯ ಎಲ್ಲಾ ಸಾರ್ವಜನಿಕ ಕಛೇರಿಗೆ ಅನಗತ್ಯವಾಗಿ ಪದೇಪದೇ ಬರುವ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಸಾರ್ವಜನಿಕ ಭೇಟಿಗೆ ಕಛೇರಿಯ ಮುಖ್ಯಸ್ಥರು ಅವಕಾಶ ಕಲ್ಪಿಸಬೇಕು. ಪಿ.ಜಿ./ವಸತಿ ನಿಲಯ/ಸಾರ್ವಜನಿಕ ಹಾಸ್ಟೆಲ್‍ಗಳಲ್ಲಿ ಸಂಬಂಧಿಸಿದ ಮಾಲೀಕರು/ ನಿಲಯ ಪಾಲಕರು ಸ್ವಚ್ಛತೆ ಹಾಗೂ ಶುಚಿತ್ವ ಕಾಪಾಡಿಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.
ಆಸ್ಪತ್ರೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸಂಸ್ಥೆ, ತಯಾರಿಕಾ ಮತ್ತು ವಿತರಣಾ ಘಟಕ, ಖಾಸಗಿ ಮತ್ತು ಸಾರ್ವಜನಿಕ ವಲಯಗಳು, ಔಷಧಾಲಯಗಳು, ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ಪೂರೈಸುವ ಮಳಿಗೆ, ಪ್ರಯೋಗಾಲಯ, ನರ್ಸಿಂಗ್ ಹೋಂ, ಆಂಬುಲೆನ್ಸ್, ಪಶುಚಿಕಿತ್ಸಾಲಯ, ಜನೌಷಧಿಕೇಂದ್ರ, ಸಂಶೋಧನಾ ಪ್ರಯೋಗಾಲಯಗಳ ಸೇವೆಗಳು ಮುಂದುವರೆಯುತ್ತವೆ.
ಸಾರ್ವಜನಿಕ ವಿತರಣಾ ಶಾಪ್(ಪಿ.ಡಿ.ಎಸ್.) ಅಡಿಯಲ್ಲಿ ಕಾರ್ಯನಿರ್ವಹಿಸುವ ಆಹಾರ ಮಳಿಗೆ ಸೇರಿದಂತೆ ದಿನಸಿ ಅಂಗಡಿ/ ಹಣ್ಣು ಮತ್ತು ತರಕಾರಿ/ ಹಾಲು ಮತ್ತು ಡೈರಿ ಉತ್ಪನ್ನಗಳ ಮಾರಾಟ ಮಳಿಗೆ/ ಮಾಂಸ ಮತ್ತು ಮೀನಿನ ಆಹಾರ/ ಬಿಸ್ಕತ್ ಮತ್ತು ಬೇಕರಿ ಉತ್ಪನ್ನ/ ಸಿಹಿ ತಿನಿಸುಗಳ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಪೆಟ್ರೋಲ್ ಬಂಕ್/ ಎಲ್.ಪಿ.ಜಿ. ಪೆಟ್ರೋಲಿಯಂ ಮತ್ತು ಗ್ಯಾಸ್/ ಬಿತ್ತನೆ ಬೀಜ/ ಕೀಟನಾಶಕ ಮತ್ತು ರಸಗೊಬ್ಬರ ಮಳಿಗೆಗಳನ್ನು ತೆರೆಯಲು ಹಾಗೂ ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳಾದ ಔಷಧ/ ವೈದ್ಯಕೀಯ ಸಾಧನ ಮತ್ತು ಅವುಗಳಿಗೆ ಸಂಬಂಧಿಸಿದ ಕಚ್ಚಾ ಅಥವಾ ಮದ್ಯಂತರ ವಸ್ತುಗಳು/ ಆಹಾರ ಸಾಮಗ್ರಿಗಳ ಸಾಧನಗಳನ್ನು ಪ್ಯಾಕಿಂಗ್ ಮಾಡುವ ಉತ್ಪಾದನಾ ಘಟಕಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಗತ್ಯ ಸರಕುಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ.
ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದಿಂದ ವಿನಾಯತಿ ನೀಡಲಾಗಿರುವ ಸೇವೆಗಳಿಗೆ ಸಂಬಂಧಿಸಿದ ಸಂಸ್ಥೆ/ ಸಿಬ್ಬಂದಿಗಳು ಕೋವಿಡ್-19 ವೈರಣು ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಹಾಗೂ ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಸಲಹೆ-ಸೂಚನೆಗಳಂತೆ ಸೂಕ್ತ ಕ್ರಮಗಳನ್ನು ವಹಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
ನಿಷೇಧಿತ ಅವಧಿಯಲ್ಲಿ ಯಾವುದೇ ವ್ಯಕ್ತಿ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯೊಂದಿಗೆ ಭಾರತೀಯ ದಂಡ ಸಂಹಿತೆ ಕಲಂ 188ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶಿಸಿದ್ದಾರೆ.