ತುಮಕೂರು:
ಜಿಲ್ಲೆಯಲ್ಲಿ ನೈಸರ್ಗಿಕ ನೀರಿನ ಮೂಲಗಳಾದ ಹಳ್ಳ, ಕೆರೆಗಳನ್ನು ಪುನಶ್ಚೇತನಗೊಳಿಸುವುದರಿಂದ ಅಂತರ್ಜಲ ಸಾಮಥ್ರ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಕುರಿತು ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಸಹಾಯಕ ನಿರ್ದೇಶಕರು(ಗ್ರಾ.ಉ.)ಗಳು, ಎಂ.ಐ.ಎಸ್. ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಇಂಜಿನಿಯರುಗಳಿಗಾಗಿ ಏರ್ಪಡಿಸಿದ್ದ ತರಬೇತಿಯನ್ನುದ್ದೇಶಿಸಿ ಅವರು ಮಾತನಾಡುತ್ತಾ, ನೀರಿನ ಮೂಲಗಳಲ್ಲಿ ಮಣ್ಣಿನ ಸವಕಳಿ ಹಾಗೂ ಹೂಳು ತುಂಬುವಿಕೆಯನ್ನು ಕಡಿಮೆ ಮಾಡುವುದರಿಂದ ಹಳ್ಳ, ಕೆರೆಗಳಿಗೆ ನೀರಿನ ಹರಿವು ಹೆಚ್ಚುತ್ತದೆ. ನದಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಸ್ಯವರ್ಗವನ್ನು ಅಭಿವೃದ್ಧಿಗೊಳಿಸುವುದರಿಂದ ನೈಸರ್ಗಿಕ ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಪ್ರಸಕ್ತ ವರ್ಷದಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಿರುವ ರಾಜ್ಯದ 9 ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯು ಒಂದಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಎಲ್ಲಾ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಚೇತನ ಯೋಜನೆಯನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ಕ್ರಮ ವಹಿಸಲಾಗಿದೆ. ಸದರಿ ಸಂಸ್ಥೆಯವರು ಯೋಜನೆಯ ರೂಪು-ರೇಷೆಯನ್ನು ಈಗಾಗಲೇ ತಯಾರಿಸಿದ್ದು, ಮಳೆನೀರು ಸಂಗ್ರಹಣೆ ಮತ್ತು ಮಣ್ಣಿನ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳ ಉದ್ದಕ್ಕೂ ಕೃತಕವಾದ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು, ಸ್ವಾಭಾವಿಕ ಸಸ್ಯವರ್ಗವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಸಾಂಪ್ರದಾಯಿಕ ನೀರಿನ ಹರಿವು ಇರುವ ಪ್ರದೇಶಗಳನ್ನು ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ಗುರುತಿಸಲಾಗಿದ್ದು, ಯಾವ ಸ್ಥಳಗಳಲ್ಲಿ ಯಾವ ರೀತಿಯ ಮಳೆ ನೀರು ಕೊಯ್ಲು ರಚನೆಗಳನ್ನು ಅಳವಡಿಸಬೇಕೆನ್ನುವ ಕಾರ್ಯಯೋಜನೆಯನ್ನು ಈಗಾಗಲೇ ತಯಾರಿಸಲಾಗಿದೆ. ಯೋಜನೆಯ ಅನುಷ್ಟಾನಕ್ಕೆ ತಗಲುವ ಕಾಮಗಾರಿ ವೆಚ್ಚವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಭರಿಸಲಾಗುವುದು. ಅನುಷ್ಟಾನದ ಉಸ್ತುವಾರಿ ಮತ್ತು ತಾಂತ್ರಿಕ ನೆರವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧಿಕಾರಿ ಮತ್ತು ನೌಕರರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಯೋಜನೆಯಡಿ ಪ್ರಮುಖವಾಗಿ ಕಲ್ಲು ಗುಂಡು ತಡೆ(ಬೋಲ್ಡರ್‍ಚೆಕ್) ನಿರ್ಮಿಸುವ ಮೂಲಕ ಹರಿಯುವ ನೀರಿನ ವೇಗವನ್ನು ನಿಧಾನಗೊಳಿಸಿ ಮಳೆ ನೀರನ್ನು ಇಂಗಿಸುವುದು, ಮರು ಪೂರಣ ಬಾವಿ ಮತ್ತು ಇನ್‍ಜೆಕ್ಷನ್ ವೆಲ್(ಕೊಳವೆ ಬಾವಿ)ಗಳನ್ನು ನಿರ್ಮಿಸಿ ತ್ವರಿತವಾಗಿ ಅಂತರ್ಜಲ ಮರುಪೂರಣಗೊಳ್ಳುವಂತೆ ಮಾಡುವುದು, ವಾಟರ್‍ಪೂಲ್(ನೀರಿನ ಹೊಂಡ)ಗಳನ್ನು ನಿರ್ಮಿಸುವ ಮುಖಾಂತರ ದೀರ್ಘಕಾಲದವರೆಗೆ ಮೇಲ್ಮೈ ನೀರು ದೊರೆಯುವಂತೆ ಮಾಡುವಂತಹ ಅಂತರ್ಜಲ ಮರು ಪೂರಣ ರಚನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಬೋಲ್ಡರ್ ಚೆಕ್‍ಗಳನ್ನು ನೀರಿನ ಹರಿವು ನೇರವಾಗಿರುವ ಸ್ಥಳಗಳಲ್ಲಿ ರಚನೆ, ನೀರನ್ನು ಇಂಗಿಸಬಹುದಾದ ಸ್ಥಳಗಳಲ್ಲಿ ಮರುಪೂರಣ ಬಾವಿ ಹಾಗೂ ಇನ್‍ಜೆಕ್ಷನ್ ವೆಲ್ ರಚಿಸುವುದಲ್ಲದೆ, ಪ್ರತಿಯೊಂದು ರಚನೆಗಳ ಸುತ್ತಲೂ ವಾಟ್‍ರ್‍ಪೂಲ್‍ಗಳನ್ನು ರಚಿಸಿ ಬಹು ದೊಡ್ಡ ಗಾತ್ರದ ನೀರಿನ ಹರಿವನ್ನು ಅಂತರ್ಜಲಕ್ಕೆ ಸೇರ್ಪಡೆ ಮಾಡುವ ಯೋಜನೆ ಇದಾಗಿದೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ನಿಯೋಜನೆಗೊಂಡ ತಾಂತ್ರಿಕ ಪರಿಣಿತರು ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚನೆಗಳನ್ನು ರಚಿಸುವ ಅವಶ್ಯಕತೆ ಇದ್ದು, ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸವಿರುವ ಆಸಕ್ತಿ ಹೊಂದಿರುವ ಯುವಕ ಯುವತಿಯರನ್ನು ಕಾಯಕ ಬಂಧುಗಳನ್ನಾಗಿ ಆಯ್ಕೆ ಮಾಡಿ ಕಾಮಗಾರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗುವುದು. ಪ್ರಸಕ್ತ ಆರ್ಥಿಕ ವರ್ಷ ಮುಗಿಯುವುದರೊಳಗಾಗಿ ಜಿಲ್ಲೆಯಾದ್ಯಂತ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ನೀರಿನ ಪುನಶ್ಚೇತನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರತಿ ಪಂಚಾಯಿತಿಗಳಿಂದ ಅವುಗಳ ವ್ಯಾಪ್ತಿಯಲ್ಲಿನ ಕಿರು ಜಲಾನಯನದಲ್ಲಿ ಜಲ ಮತ್ತು ಸಸ್ಯ ಸಂಪನ್ಮೂಲ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸಲಾಗುವುದು. ಆಯಾ ಕಿರು ಜಲಾನಯನದಲ್ಲಿ ಆಗುವ ಜಲಮೂಲಗಳ ಮಾಪನ ಮತ್ತು ಅದರ ಬಗ್ಗೆ ಅರಿವು ಉಂಟು ಮಾಡಿ ಸಂರಕ್ಷಣೆ ಮತ್ತು ಸದ್ಬಳಕೆ ಜವಾಬ್ದಾರಿ ಹೊರುವುದರೊಂದಿಗೆ ಜಲ ತಾಣಗಳ ಸುತ್ತಲೂ ಸ್ಥಳೀಯ ಸ್ವಾಭಾವಿಕ ಸಸ್ಯವರ್ಗಗಳ ಪುನರ್ ಸ್ಥಾಪನೆ ಮತ್ತು ಪರಿಸರ ಸುಸ್ಥಿರತೆಗೆ ಕಿರು ಅರಣ್ಯ ಸ್ಥಾಪನೆ, ಪಕ್ಷಿ ದುಂಬಿ ಪ್ರಾಣಿ ಮತ್ತು ಮನುಷ್ಯರ ಪ್ರಕೃತಿ ಧಾಮಗಳ ಸ್ಥಾಪನೆ, ಕೃಷಿಕರ ಆರ್ಥಿಕ ಅಭಿವೃದ್ಧಿ ಹಾಗೂ ಅವರ ಹೊಲಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಳಲ್ಲಿ ಕಾರ್ಯಕ್ರಮ ಅನುಷ್ಟಾನ, ಸ್ವಾಭಾವಿಕ ಸಸ್ಯವರ್ಗದ ಶೇಕಡವಾರು ವಿಸ್ತರಣೆ, ಕೃಷಿಯಿಂದ ಕೃಷಿ ಅರಣ್ಯ, ಕೃಷಿ ತೋಟಗಾರಿಕೆ ವಿಸ್ತರಣೆ ಮತ್ತಿತರ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಾಚರಣೆ ನಿರ್ದೇಶಕ ರವೀಂದ್ರ ದೇಸಾಯಿ ತರಬೇತಿ ನೀಡಿದರು. ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ.ರಮೇಶ್, ಮುಖ್ಯ ಲೆಕ್ಕಾಧಿಕಾರಿಗಳು, ಮುಖ್ಯ ಯೋಜನಾಧಿಕಾರಿಗಳು, ಸಹಾಯಕ ಜಿಲ್ಲಾ ಸಂಯೋಜಕರು, ಜಿಲ್ಲಾ ಐಇಸಿ ಸಂಯೋಜಕರು, ಮತ್ತಿತರರು ಉಪಸ್ಥಿತರಿದ್ದರು.