ತುಮಕೂರು :

      ಪಿಪಿಇ ಕಿಟ್ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ||ಚಂದ್ರಿಕಾ ದಿಢೀರ್ ವರ್ಗಾವಣೆಯಾಗಿದೆ. ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಅವರು ಈ ಅವ್ಯವಹಾರ ಕುರಿತಂತೆ ಸುದ್ಧಿಗೋಷ್ಠಿ ನಡೆಸಿ ಆರೋಪಿಸಿದ್ದರು. ಡಿಎಚ್‍ಓ ಚಂದ್ರಿಕಾ ರವರು ಇಡೀ ಜಿಲ್ಲೆಯಾದ್ಯಂತ ಭ್ರಷ್ಟಾಚಾರವೆಸಗಿದ್ದು, ಕೋವಿಡ್-19 ಪರೀಕ್ಷೆ ಮಾಡಲು ಬಳಸುತ್ತಿದ್ದ ಕಿಟ್‍ಗಳನ್ನು ತಾಲ್ಲೂಕ್ ಆಸ್ಪತ್ರೆಗಳು ಖರೀದಿಸುವ ವಿಚಾರದಲ್ಲಿ ತಮಗೆ ಬೇಕಾದ ಕಂಪನಿಗಳೊಂದಿಗೆ ಶಾಮೀಲಾಗಿ ಭ್ರಷ್ಟಾಚಾರ ಮಾಡಿದ್ದಾರೆ.

      ಸಾವಿನ ಮನೆಯಲ್ಲಿ ಹಣ ಮಾಡುವ ದಂಧೆಗಿಳಿದಿದ್ದಾರೆ ಎನ್ನುವಂತಹ ಆರೋಪಗಳು ಪ್ರಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಡಿಎಚ್‍ಓ ಚಂದ್ರಿಕಾ ರವರ ಭ್ರಂಹಾಂಡ ಭ್ರಷ್ಟಾಚಾರ ಕುರಿತು ತೀವ್ರವಾದ ವಿರೋಧ ಬಂದ ಹಿನ್ನೆಲೆಯಲ್ಲಿ ನಮ್ಮ ಪತ್ರಿಕೆಯೂ ಸೇರಿದಂತೆ ಮಾಧ್ಯಮಗಳು ಚಂದ್ರಿಕಾ ರವರ ಭ್ರಷ್ಟಾಚಾರ ಕುರಿತು ವರದಿಯನ್ನ ಪ್ರಕಟಿಸಿತ್ತು. ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಭ್ರಷ್ಟಾಚಾರದ ಸುದ್ಧಿ ಇದರ ಕುರಿತು ಟೀಕೆಗಳು ಆರಂಭವಾಗಿದ್ದು ದಾಖಲೆಗಳ ಸಮೇತ ಆರೋಪ ಸಾಭೀತಾಗುತ್ತಿರುವುದರಿಂದ ಆರೋಗ್ಯ ಸಚಿವರು ಕೂಡಲೇ ಗಮನಹರಿಸಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ||ಚಂದ್ರಿಕಾ ರವರನ್ನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಆಸ್ಪತ್ರೆಯ ನೇತ್ರ ತಜ್ಞರಾಗಿ ಆದೇಶ ಹೊರಡಿಸಿದ್ದು, ಖಾಲಿಯಾದ ಹುದ್ದೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಜ್ಞವೈದ್ಯ ಡಾ||ನಾಗೇಂದ್ರಪ್ಪ ರವರನ್ನ ಜಿಲ್ಲಾ ಆರೋಗ್ಯಾಧಿಕಾರಿಗಳಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುತ್ತದೆ.

      ಜಿಲ್ಲಾ ಆರೋಗ್ಯಾಧಿಕಾರಿಗಳಾಗಿದ್ದ ಚಂದ್ರಿಕಾರವರು ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞರಾಗಿ ಕಾರ್ಯ ನಿರ್ವಹಿಸುವುದು ಒಂದು ರೀತಿಯ ಮುಜುಗರದ ಸಂಗತಿ. ಇಡೀ ವಿಶ್ವದಾದ್ಯಂತ ಕೊರೊನಾ ಮಹಾಮಾರಿಗೆ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಕೊರೊನಾ ಮಹಾಮಾರಿಯನ್ನೇ ಹಣ ಮಾಡುವ ದಂಧೆಗೆ ದುರ್ಬಳಕೆ ಮಾಡಿಕೊಂಡದ್ದು ಡಿಎಚ್‍ಓ ಚಂದ್ರಿಕಾ ರವರ ಘನತೆಗೆ ಶೋಭೆ ತರುವಂತದ್ದಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

(Visited 1,192 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp