ದೆಹಲಿ:
ಕೇರಳ ಸರ್ಕಾರ ಮುಂದಿನ ದಿನಗಳಲ್ಲಿ ವಿಶೇಷ ಭದ್ರತೆಯೊಂದಿಗೆ 10-50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಬೆಟ್ಟ ಹತ್ತಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತದೆ ಎಂದು ಪಿಣರಾಯಿ ವಿಜಯನ್ ಅವರು ಭರವಸೆ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಶಬರಿಮಲೆ ಪ್ರವೇಶಕ್ಕೆ ಪೊಲೀಸ್ ಭದ್ರತೆ ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಸಿಎಂ ಪಿಣರಾಯಿ ವಿಜಯನ್ ಅವರು ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸದೇ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಈಗಾಗಲೇ ನಾನು ನಮ್ಮ ಯೋಜನೆ ಬಗ್ಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಹಿರಿಯ ಅರ್ಚಕರೊಂದಿಗೆ ಮಾತಾಡಿದ್ದೇನೆ. ಈ ವಿಚಾರವನ್ನು ಎಲ್ಲಾ ಪಕ್ಷಗಳ ಮುಖಂಡರೊಂದಿಗೂ ಒಮ್ಮೆ ಚರ್ಚೆ ಮಾಡಲಾಗುವುದು. ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ನಮ್ಮ ಸರ್ಕಾರದ ಎಲ್ಲಾ ಪಕ್ಷಗಳು ಆದೇಶ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.
ಶಬರಿಮಲೆ ಭಕ್ತರೆಲ್ಲ ದಯವಿಟ್ಟು ಅರ್ಥಮಾಡಿಕೊಂಡು ಸಹಕರಿಸಬೇಕು. ಇದು ಕಾನೂನಿಗೆ ಬೆಲೆ ಕೊಡುವ ನೆಲ, ಪ್ರಜಾಪ್ರಭುತ್ವವೇ ಈ ನಾಡಿನ ಸೌಂದರ್ಯ. ಭಕ್ತರ ನಂಬಿಕೆಗಳು ಮಹಿಳೆಯರ ಮೂಲಭೂತ ಹಕ್ಕುಗಳಿಗಿಂತ ದೊಡ್ಡದಾಗಲು ಸಾಧ್ಯವಿಲ್ಲ. ನಮಗೆ ಬೇರೆ ಯಾವುದೇ ದಾರಿಯಿಲ್ಲ, ನ್ಯಾಯಲಯದಿಂದ ಬಂದ ಆದೇಶವನ್ನು ಪಾಲಿಸಲೇಬೇಕಾದುದು ನಮ್ಮ ಕರ್ತವ್ಯ. ನಮ್ಮ ಉದ್ದೇಶವನ್ನು ಅರ್ಥಮಾಡಿಕೊಳ್ಳಿ ಎಂದು ಸಿಎಂ ಅವರು ಅಯ್ಯಪ್ಪ ಭಕ್ತರಲ್ಲಿ ಮನವಿ ಮಾಡಿದರು.