ಬೆಂಗಳೂರು:
ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 233 ಕೆಜಿ ಗಾಂಜಾವನ್ನು ಕೇಂದ್ರ ಮಾದಕದ್ರವ್ಯ ನಿಯಂತ್ರಣ ದಳ ಅಧಿಕಾರಿಗಳು ಜಪ್ತಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮಾದಕವಸ್ತು ಮಾರಾಟ ದಂಧೆಯ ಕಿಂಗ್ ಪಿನ್ ಆಂಧ್ರಪ್ರದೇಶ ಮೂಲದ ಅನುಮುಲು ಪ್ರಸಾದ್ ಅಲಿಯಾಸ್ ಗುರು, ಈತನ ಸಹಚರರಾದ ಎಸ್ ರಾಮಕೃಷ್ಣ ಹಾಗೂ ಕೆ ರಾಜೇಶ್ ಬಂಧಿತರು, ಆರೋಪಿಗಳು ನವೆಂಬರ್ 13ರಂದು ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಸೈರ್ ಕಾರಿನ ಡಿಕ್ಕಿಯಲ್ಲಿಟ್ಟು ಗಾಂಜಾ ತುಂಬಿಕೊಂಡು ವಿಶಾಖಪಟ್ಟಣದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು.
ಆದರೆ, ತೆಲಂಗಾಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಜೊತೆಗೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಇದ್ದ ಕಾರಣ ತಮ್ಮ ಎಂದಿನ ಮಾರ್ಗ ಬದಲಿಸಿ ಬೆಂಗಳೂರು ಮೂಲಕ ಮಹಾರಾಷ್ಟ್ರ ಹೊರಟಿದ್ದರು.
ದೇವನಹಳ್ಳಿ ಟೋಲ್ ಬಳಿ ಕಾರು ಬರುತ್ತಿರುವ ಮಾಹಿತಿ ಆಧರಿಸಿ ತಡೆದು ತಪಾಸಣೆ ನಡೆಸಿದಾಗ ಗಾಂಜಾ ಸಿಕ್ಕಿದೆ. ಆರೋಪಿಗಳು 110 ಪ್ಯಾಕೆಟ್ ನಲ್ಲಿ 223 ಕೆಜಿ ಗಾಂಜಾ ಸಾಗಣೆ ಮಾಡುತ್ತಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.