ತುಮಕೂರು:
ನಗರಕ್ಕೆ ಹೇಮಾವತಿ ನೀರು ಪೂರೈಕೆ ಮಾಡುವ ಬುಗುಡನಹಳ್ಳಿ ಜಲ ಸಂಗ್ರಹಾಗಾರದಲ್ಲಿ ಕೇವಲ ಒಂದೂವರೆ ತಿಂಗಳಿಗಾಗುವಷ್ಟು ನೀರು ಸಂಗ್ರಹಣೆ ಮಾತ್ರ ಇದ್ದು, ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿ ಜನರು ಪರಿತಪಿಸುವಂತಾಗಿದೆ ಎಂದು ಸರ್ಕಾರ ಮತ್ತು ಮಹಾನಗರಪಾಲಿಕೆ ಆಡಳಿತಕ್ಕೆ ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ ಆಕ್ಷೇಪಿಸಿದ್ದಾರೆ.
ಹೇಮಾವತಿ ನೀರನ್ನು ಬುಗುಡನಹಳ್ಳಿ ಜಲ ಸಂಗ್ರಹಾಗಾರದಿಂದ ನಗರದ ಬಹುತೇಕ ಬಡಾವಣೆಗಳಿಗೆ ವಿತರಿಸುತ್ತಿದ್ದು ಸದ್ಯ ಬುಗುಡನಹಳ್ಳಿಯಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿರುವುದರಿಂದ ಇದೀಗ ಹಲವು ಬಡಾವಣೆಗಳಲ್ಲಿ ಶೇಕಡ ಮೂವತ್ತೈದರಷ್ಟು ನೀರು ಪೂರೈಕೆ ಕಡಿಮೆಯಾಗಿ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.
ಇಂದು ಬುಗುಡನಹಳ್ಳಿ ಜಲಸಂಗ್ರಹಾಗಾರದ ಪ್ರದೇಶಕ್ಕೆ ಭೇಟಿ ನೀಡಿದ ಸಾರ್ವಜನಿಕ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಪಿ. ಮಹೇಶ, ಪದಾಧಿಕಾರಿಗಳಾದ ಕೆ. ಹರೀಶ್, ಎಂ.ಎಸ್. ಚಂದ್ರಪ್ಪ, ಮದನ್‍ಸಿಂಗ್, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಬನಶಂಕರಿಬಾಬು ರವರುಗಳು ವೀಕ್ಷಿಸಿ, ನೀರಿನ ಸಂಗ್ರಹದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರಿಗೆ ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಪಂಚರಾಯನಪಾಳ್ಯದ ಜಲ ಶುದ್ಧೀಕರಣ ಕೇಂದ್ರಕ್ಕೆ ನೀರು ಪಂಪ್ ಮಾಡಿ, ಶುದ್ಧೀಕರಿಸಿದ ನೀರನ್ನು ಈವರೆವಿಗೂ ಪ್ರತಿದಿನ ಮಹಾನಗರಪಾಲಿಕೆ ಆವರಣದ ಐವತ್ತು ಲಕ್ಷ ಲೀಟರ್ ಸಾಮಥ್ರ್ಯದ ಪಂಪ್‍ಹೌಸ್‍ಗೆ ಇಪ್ಪತ್ತು ಗಂಟೆ ಪಂಪ್ ಮಾಡಿದ ನೀರನ್ನು 215 ಹೆಚ್.ಪಿ. ಎರಡು ಮೋಟಾರ್‍ಗಳ ಮೂಲಕ ಇಪ್ಪತ್ತು ಗಂಟೆ ನೀರು ಪಂಪ್ ಮಾಡುಲಾಗುತ್ತಿದ್ದನ್ನು ಇದೀಗ ಸಿಂಗಲ್ 215 ಹೆಚ್.ಪಿ. ಮೋಟಾರ್‍ನಲ್ಲಿ ಹದಿಮೂರು ಗಂಟೆ ವಿತರಿಸಲಾಗುತ್ತಿದೆ. ಇದೇ ರೀತಿ ವಿದ್ಯಾನಗರ ವಾಟರ್ ವಕ್ರ್ಸ್‍ಗೆ ಇಪ್ಪತ್ತು ಗಂಟೆ ನೀರು ಪೂರೈಕೆಯಲ್ಲಿ ಎರಡು ಸಂಖ್ಯೆಯ 100 ಹೆಚ್.ಪಿ., ಎರಡು ಸಂಖ್ಯೆಯ 180 ಹೆಚ್.ಪಿ., ಎರಡು ಸಂಖ್ಯೆಯ 120 ಹೆಚ್.ಪಿ. ಒಂದು ಸಂಖ್ಯೆಯ 40 ಹೆಚ್.ಪಿ.ಗಳ ಮೂಲಕ ದಿನವೂ ಇಪ್ಪತ್ತು ಗಂಟೆ ನೀರು ಪೂರೈಕೆಯಾಗುತ್ತಿದ್ದು, ಇದೀಗ ಕೇವಲ ಒಂದೊಂದು ಸಂಖ್ಯೆಯ ಮೋಟಾರ್‍ಗಳ ಮೂಲಕ ಏಳು ಗಂಟೆ ನೀರು ಪೂರೈಸಲಾಗುತ್ತಿದೆ.
ಇನ್ನೊಂದು ಜಲಸಂಗ್ರಹಾಗಾರ ಸಂತೇಪೇಟೆಗೆ ಹದಿನೆಂಟು ಗಂಟೆ ನೀರು ಪೂರೈಕೆಯಲ್ಲಿ ಎರಡು ಸಂಖ್ಯೆ 120 ಹೆಚ್.ಪಿ. ಮೋಟಾರ್‍ಗಳು ಚಾಲನೆ ಮಾಡುತ್ತಿದ್ದು, ಇದೀಗ ಕೇವಲ ಹದಿನಾಲ್ಕು ಗಂಟೆ ನೀರು ವಿತರಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೆ.ಪಿ. ಮಹೇಶ ವಿವರಿಸಿ, ಒಟ್ಟಾರೆ ಹೇಮಾವತಿ ಕುಡಿಯುವ ನೀರಿನ ವ್ಯತ್ಯಯದ ವಾಸ್ತವ ಸ್ಥಿತಿ ಬಗ್ಗೆ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೇಮಾವತಿ ನೀರು ಕೊರತೆ :
ತುಮಕೂರಿಗೆ ಹೇಮಾವತಿ ನೀರು ಪೂರೈಕೆ ಮಾಡುವ ಹೆಬ್ಬಾಕದ ಕೆರೆ ಪೂರ್ಣ ಖಾಲಿಯಾಗಿದ್ದು, ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಕೇವಲ ಒಂದುವರೆ ತಿಂಗಳಿಗಾಗುವಷ್ಟು ನೀರು ಸಂಗ್ರಹಣೆ ಇದ್ದು, ಮುಂದಿನ ದಿನಗಳಲ್ಲಿ ತುಮಕೂರು ನಗರಕ್ಕೆ ಕುಡಿಯುವ ನೀರಿನ ಹಾಹಾಕಾರವಾಗುವುದು ನಿಶ್ಚಿತ ಎಂದು ಸಾರ್ವಜನಿಕ ಸುರಕ್ಷಾ ಸಮಿತಿ ಸರ್ಕಾರ, ಜಿಲ್ಲಾಡಳಿತ, ಮಹಾನಗರಪಾಲಿಕೆ ಆಡಳಿತಕ್ಕೆ ಗಮನ ಸೆಳೆದಿದೆ. ಈ ಕೂಡಲೇ ಸರ್ಕಾರ, ಜಿಲ್ಲಾಡಳಿತ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರು ನಗರದ ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡುವ ದೃಷ್ಠಿಯಿಂದ ನೀರು ಕೂಡಲೇ ಹರಿಸಬೇಕೆಂದು ಒತ್ತಾಯಿಸಿ, ನೀರು ಹರಿಸದಿದ್ದರೆ ಪರಿಸ್ಥಿತಿ ಗಂಭೀರವಾಗುವುದೆಂದು ಎಚ್ಚರಿಸಿದೆ.
ಮುಖ್ಯಮಂತ್ರಿಗಳಿಗೆ ಮನವಿ :
ತುಮಕೂರು ನಗರದ ನಾಗರೀಕರ ಹಿತದೃಷ್ಠಿಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ನೀರಿನ ವಿತರಣೆಗೆ ಇದೀಗ ಒಂದೂವರೆ ತಿಂಗಳಿಗಾಗುವಷ್ಟು ಕುಡಿಯುವ ನೀರು ಸಂಗ್ರಹ ಇರುವುದರಿಂದ, ನಗರದ ನಾಗರೀಕರಿಗೆ ಅನುಕೂಲವಾಗುವಂತೆ ಈ ಕೂಡಲೇ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರಿನ ಬುಗುಡನಹಳ್ಳಿ ನೀರು ಸಂಗ್ರಹಾಗಾರಕ್ಕೆ ನೀರು ಹರಿಸುವಂತೆ ಮಾನ್ಯ ಮುಖ್ಯಮಂತ್ರಿಗಳವರಿಗೆ ಸಾರ್ವಜನಿಕ ಸುರಕ್ಷಾ ಸಮಿತಿ ಪತ್ರದ ಮುಖೇನ ಮನವಿ ಮಾಡಿದೆ.