ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ(ಜಿ.ಪಂ.), ಮಹಾನಗರ ಪಾಲಿಕೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾವು ಮೇಳ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ರೈತರು ತಮ್ಮ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಸ್ಥಳೀಯವಾಗಿ ಸಣ್ಣ-ಸಣ್ಣ ಮಾರುಕಟ್ಟೆಗಳ ಮೂಲಕ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಹಾಗೂ ಗ್ರಾಹಕರೂ ಸಹ ಮಾವಿನ ಹಣ್ಣು ಖರೀದಿಸಿ ಸವಿಯಬಹುದಾಗಿದೆ ಎಂದರು.
ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಾವಿನ ಹಣ್ಣು ಸವಿಯಲು ಜನ ಹಿಂಜರಿಯುತ್ತಾರೆ. ಆದರೆ ರೈತರೇ ರಾಸಾಯನಿಕ ಬಳಸದೆ ನೈಸರ್ಗಿಕ ಮತ್ತು ಸಾಂಪ್ರದಾಯಿಕವಾಗಿ ಮಾಗಿಸಿದ ಹಣ್ಣುಗಳಿಗೆ ಬೇಡಿಕೆ ಇದೆ ಎಂದು ಸಚಿವರು ನುಡಿದರು.
ಇದೇ ಸಂದರ್ಭದಲ್ಲಿ ತೋಟಗಾರಿಕಾ ಉಪನಿರ್ದೇಶಕ ಬಿ.ರಘು ಅವರು ಮಾತನಾಡಿ, ರೈತರು ಇಚ್ಛಿಸಿದ್ದಲ್ಲಿ ತಮ್ಮ ಮಾವಿನ ಕಾಯಿಯನ್ನು ನೈಸರ್ಗಿಕವಾಗಿ ಮಾಗಿಸಿ ಅಥವಾ ಇಥಲಿನ್ ಅನಿಲದಿಂದ ಉಪಚರಿಸಿ ಮಾಗಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿರುತ್ತದೆ. ತೋಟಗಾರಿಕೆ ಇಲಾಖೆಯು ಮಹಾನಗರ ಪಾಲಿಕೆ ವತಿಯಿಂದ ತುಮಕೂರು ನಗರದ ವಿವಿಧ ವಾರ್ಡ್ಗಳಲ್ಲಿ ಮಾವು ಮಾರಾಟ ಮಾಡಲು ಸ್ಥಳಗಳನ್ನು ಗುರುತಿಸಲಾಗಿರುತ್ತದೆ. ಆಸಕ್ತ ರೈತರು ಸರ್ಕಾರೇತರ ಸಂಘ-ಸಂಸ್ಥೆಗಳು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. ಯಾವುದೇ ಕಾರಣಕ್ಕೂ ಕ್ಯಾಲಿಯಂ ಕಾರ್ಬೋಹೈಡ್ರೆಡ್ ಉಪಯೋಗಿಸಿ ಹಣ್ಣು ಮಾಗಿಸಲು ನಿಷೇಧಿಸಿದೆ. ಕಲ್ಪತರು ಎಂಬ ಶೀರ್ಷಿಕೆಯಡಿ ತುಮಕೂರು ಮಾವಿಗೆ ಬ್ರಾಂಡ್ ಇಡಬಹುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್, ಮಹಾನಗರಪಾಲಿಕೆ ಆಯುಕ್ತ ಟಿ. ಭೂಬಾಲನ್, ತೋಟಗಾರಿಕೆ ಉಪನಿರ್ದೇಶಕ ರಘು, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಗೌಡ, ಆಶ್ಟ್ರಿಚ್ ಕಂಪನಿ ವ್ಯವಸ್ಥಾಪಕ ನೀಲೇಶ್ ಮತ್ತಿತರ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.