ಮಧುಗಿರಿ:
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರ ಪ್ರಕೃತಿ ವಿಕೋಪಗಳು ಕಾಡುತ್ತಿದ್ದು, ಸಾರ್ವಜನಿಕ ಆಸ್ತಿ ಸೇರಿದಂತೆ ಸುಮಾರು 35 ಸಾವಿರ ಕೋಟಿ ನಷ್ಟವಾಗಿದ್ದು, ಇದರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಶುಕ್ರವಾರ ಪಾವಗಡಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಹಾವಳಿಯಿಂದಾಗಿ ರಾಜ್ಯಕ್ಕೆ ಬಹಳಷ್ಟು ತೊಂದರೆಯುಂಟಾಗಿದ್ದು 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ. ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ ರಾಜ್ಯದ ಕಾರ್ಮಿಕರ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರ ಲಭ್ಯತೆಯ ನಂತರ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಲಾಕ್‍ಡೌನ್ ಸಮಸ್ಯೆಯಿಂದಾಗಿ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪ್ರತೀ ತಿಂಗಳೂ ಸರ್ಕಾರಿ ನೌಕರರಿಗೆ ವೇತನಕ್ಕಾಗಿ ಸುಮಾರು 6500 ಸಾವಿರ ಕೋಟಿ ನೀಡಲಾಗುತ್ತಿದ್ದು, ಇದಕ್ಕೂ ಸರ್ಕಾರ ಪ್ರಥಮ ಆದ್ಯತೆ ನೀಡಿದೆ.
ಆದ್ದರಿಂದ ಹೊಸ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಕಾಲಾವಕಾಶ ಬೇಕಾಗಿದೆ. ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಈ ವರ್ಷದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು. ಕ್ಷೇತ್ರಗಳ ಅನುದಾನವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.
22 ಕೋಟಿಗೆ ಬಿಡುಗಡೆಗೆ ಮನವಿ : ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅನುಮೋದನೆಯಾದ 22 ಕೋಟಿ ಅನುದಾನವನ್ನು ತಡೆಹಿಡಿಯಲಾಗಿದ್ದು, ಈ ಬಗ್ಗೆ ಡಿಸಿಎಂ ರವರು ಗಮನ ಹರಿಸಿ ಹಣ ಬಿಡುಗಡೆಗೊಳಿಸಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸಂಸದ ನಾರಾಯಣಸ್ವಾಮಿ, ಜಿ.ಪಂ.ಸದಸ್ಯ ಕೆಂಚಮಾರಯ್ಯ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ಪ್ರವೀಣ್, ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ತಹಶೀಲ್ದಾರ್ ಡಾ.ವಿಶ್ವನಾಥ್, ತಾ.ಪಂ ಇಓ ದೊಡ್ಡಸಿದ್ದಯ್ಯ, ಲೋಕೋಪಯೋಗಿ ಇಇ ವಿರೂಪಾಕ್ಷಪ್ಪ, ಎಇಇ ಹೊನ್ನೇಶಯ್ಯ, ಪುರಸಭೆ ಸದಸ್ಯರಾದ ಎಂ.ಆರ್. ಜಗನ್ನಾಥ್, ಚಂದ್ರಶೇಖರಬಾಬು, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್ ಇದ್ದರು.