ಚಿಕ್ಕನಾಯಕನಹಳ್ಳಿ:
ಮಾಲಿನ್ಯ ನಿಯಂತ್ರಿಸಿ ಜೀವ ವೈವಿಧ್ಯ ಉಳಿಸಿ ಆಂದೋಲನಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ವಿಸ್ವ ಪರಿಸರ ದಿನದ ಅಂಗವಾಗಿ ಅರಣ್ಯ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರಕೃತಿ ಉದಯದ ಸಾವಿರಾರು ವರ್ಷದ ನಂತರ ಸೃಷ್ಠಿಯಾದ ಮಾನವನ ದುರಾಸೆಗೆ ಇಂದು ಇಡೀ ಪರಿಸರ ಕಲುಷಿತಗೊಂಡಿದೆ. ಶುದ್ದ ಜಲ,ಗಾಳಿ ಹಾಗೂ ಆಹಾರಕ್ಕಾಗಿ ನಾವು ಪರಿಸರವನ್ನೆ ಅವಲಂಭಿಸುವುದು ಅನಿವಾರ್ಯವೆನಿಸಿದೆ.
ಈ ನಿಟ್ಟಿನಲ್ಲಿ ಪರಿಸರದ ಸಮತೋಲನಕ್ಕೆ ಅರಣ್ಯೀಕರಣವಾಗಲೇ ಬೇಕಿದೆ. ಇದರ ಅಂಗವಾಗಿ ಮಾಲಿನ್ಯ ನಿಯಂತ್ರಿಸಿ ಜೀವ ವೈವಿಧ್ಯ ಉಳಿಸಿ ಆಂದೋಲನ ರಾಜ್ಯವ್ಯಾಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಸುನೀಲ್ ಮಾತನಾಡಿ ಅರಣ್ಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸುವ ಸಲುವಾಗಿ ಉಚಿತ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ. ಆಲ, ಅತ್ತಿ, ಹಲಸು, ಮಹೋಗನಿ, ಬೇವು, ಅರಳಿ ಮುಂತಾದ ಸಸಿಗಳನ್ನು ವಿತರಿಸಲಾಗುವುದು. ಇದನ್ನು ಬೆಳೆಸುವ ರೈತರಿಗೆ ಮೂರುವರ್ಷ ಪ್ರೋತ್ಸಾಹಧನ ನೀಡಲಾಗುವುದು. ಪ್ರತಿ ಎಕರಗೆ 250 ಅರಣ್ಯ ಸಸಿಗಳನ್ನು ನೀಡಲಾಗುವುದು. ರೈತರು ಫಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಹಾಗೂ ಮೂರು ಫೋಟೋಗಳನ್ನು ನೀಡಬೇಕಿದೆ. ಹೊಸಳ್ಳಿಯ ತೀನಂಶ್ರೀ ಸಸ್ಯಕೇಂದ್ರದಲ್ಲಿ ದಾಖಲೆಗಳನ್ನು ನೀಡಿ ಸಸಿಗಳನ್ನು ಪಡೆಯಬಹುದಾಗಿದೆ ಎಂದರು.
ಮರು ಅರಣ್ಯೀಕರಣ ಯೋಜನೆಯೂಸಹ ಚಾಲ್ತಿಯಿದ್ದು ತಾಲ್ಲೂಕಿನ ಬರಗಿಹಳ್ಳಿ, ಗೌಡನಹಳ್ಳಿ ರಾಮನಹಳ್ಳಿ ಮುಂತಾದಡೆ ಸಾಮೂಹಿಕ ಸಸಿಗಳನ್ನು ನೆಡುವ ಕಾರ್ಯನಡೆದಿದೆ. ಸಮುದಾಯದ ಸಹಭಾಗಿತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜು, ನ್ಯಾಯಾಂಗ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ. ತೇಜಸ್ವಿನಿ, ವಕೀಲರಾದ ಶ್ರೀಧರ್, ಅರಣ್ಯಾಧಿಕಾರಿ ಮಂಜುನಾಥ್, ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.