ತುಮಕೂರು:

     ಇದೇ ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ಮಾಹೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಇಂಗ್ಲೀಷ್ ವಿಷಯ ಮಾತ್ರ ನಡೆಯದೆ ಬಾಕಿ ಉಳಿದಿತ್ತು. ಸರ್ಕಾರದ ನಿರ್ದೇಶನದಂತೆ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಇದೇ ಜೂನ್ 18ರಂದು ನಡೆಸಲಾಗುವುದು. ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಿದಂತೆ ಜೂನ್ 18ರಂದು ಸಹ ಯಾವುದೇ ಲೋಪದೋಷಗಳಿಲ್ಲದೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕೆಂದು ಅವರು ನಿರ್ದೇಶನ ನೀಡಿದರು.

      ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿಗೆ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ, ಪರೀಕ್ಷೆ ಬರೆಯಲು ಸುಸ್ಥಿತಿಯಲ್ಲಿರುವ ಮೇಜುಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಬರೆಯಲು ಬರುವ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರಿನಿಂಗ್‍ಗೆ ಒಳಪಡಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದವರೆಲ್ಲರೂ ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕೆಂದರಲ್ಲದೆ, ಪರೀಕ್ಷಾ ಕೊಠಡಿಗಳು ಮಳೆ ನೀರು ಸೋರದಂತೆ ಎಚ್ಚರಿಕೆ ವಹಿಸಬೇಕು ಸೂಚಿಸಿದರು.

      ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ಒಂದು ಗಂಟೆ ಮುನ್ನ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚನೆ ನೀಡಬೇಕು. ಥರ್ಮಲ್ ಸ್ಕ್ರಿನಿಂಗ್ ಪ್ರಕ್ರಿಯೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸಬೇಕೆಂದರಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತಂಕ/ಗೊಂದಲಗಳು ಸೃಷ್ಟಿಯಾಗದಂತೆ ಸುಲಲಿತ ವಾತಾವರಣ ಕಲ್ಪಿಸಬೇಕು. ಕಂಟೋನ್‍ಮೆಂಟ್ ವಲಯದಿಂದ ಬಂದ ವಿದ್ಯಾರ್ಥಿಗಳು ಹಾಗೂ ಕೆಮ್ಮು/ನೆಗಡಿ/ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕೆಂದರು.

       ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲಲಿತಾಕುಮಾರಿ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 24419 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಅಲ್ಲದೆ 326 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದು, 676 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಂದ ಬಂದು ನಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಾಗಿ ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳೊಂದಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 22 ಬ್ಲಾಕ್ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಒಟ್ಟು 1500 ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

     ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಗರದ ಎಂಪ್ರೆಸ್ ಶಾಲೆ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಜೂನ್ 18ರಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅವರು ಮಾಡಿದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಮತ್ತಿತರರು ಉಪಸ್ಥಿತರಿದ್ದರು.

(Visited 8 times, 1 visits today)