ಮಧುಗಿರಿ:
ಉಪವಿಭಾಗದ ಲೋಕೋಪಯೋಗಿ ವಿಭಾಗ ವ್ಯಾಪ್ತಿಯಲ್ಲಿ 2019-20 ನೇ ಸಾಲಿನಲ್ಲಿ ಒಟ್ಟು 227 ಕೋಟಿ ರೂಗಳ 5641 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಪಟ್ಟಣದ ಸಿರಾಗೇಟ್‍ನಲ್ಲಿ ಶುಕ್ರವಾರ ನೂತನ ಲೋಕೋಪಯೋಗಿ ವಿಭಾಗೀಯ ಕಚೇರಿ ಉದ್ಘಾಟಿಸಿ ಮಾತನಾಡಿದರು. 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ.
ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ ರಾಜ್ಯದ ಕಾರ್ಮಿಕರ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರ ಲಭ್ಯತೆಯ ನಂತರ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿ 3.55 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡವು ಬಹಳಷ್ಟು ಸುಂದರವಾಗಿದ್ದು, ಜನತೆ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಕಚೇರಿಯನ್ನು ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಒಂದೇ ಸೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ 35 ವರ್ಷಗಳ ಹಿಂದೆ ಚಿನ್ನದ ನಾಡಾಗಿದ್ದ ಮಧುಗಿರಿಯು ಸತತ ಬರಗಾಲದಿಂದಾಗಿ ಜಯಮಂಗಲಿ, ಸುವರ್ಣಮುಖಿ ನದಿಗಳು ಹರಿಯದೇ ಇಂದು ಸೊರಗಿ ಹೋಗಿದೆ. ಎತ್ತಿನಹೊಳೆ ಯೋಜನೆಯಡಿ ನಿಗದಿಯಾಗಿರುವ 24 ಟಿಎಂಸಿ ನೀರು ಸಾಕಾಗುವುದಿಲ್ಲ. ಇದರ ಜೊತೆ ಪರ್ಯಾಯವಾಗಿ ಕುಮಾರಧಾರದಿಂದ 8 ಟಿಎಂಸಿ, ಗುರುತ್ವಾಕರ್ಷಣೆಯ ಮೂಲಕ 7 ಟಿಎಂಸಿ ನೀರು ಸೇರಿ ಹೆಚ್ಚುವರಿಯಾಗಿ 15 ಟಿಎಂಸಿ ಬರುವುದರಿಂದ ಮಧುಗಿರಿಗೆ 3, ತುಮಕೂರಿಗೆ 2.5, ಗುಬ್ಬಿಗೆ 0.5, ಚಿಕ್ಕನಾಯಕನಹಳ್ಳಿಗೆ 3, ತಿಪಟೂರಿಗೆ 3 ಪಾವಗಡಕ್ಕೆ 2 ಟಿಎಂಸಿ ನೀರು ದೊರೆಯುವುದರಿಂದ ಸಮಗ್ರ ನೀರಾವರಿಗೆ ಒತ್ತು ನೀಡಿದಂತಾಗುತ್ತದೆ. ಇದರ ಬಗ್ಗೆ ಸಣ್ಣ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ಅಲೆಮಾರಿ ಮತ್ತು ಕಾಡುಗೊಲ್ಲರ ಜನಾಂಗಕ್ಕೆ 4 ಸಾವಿರ ಮನೆಗಳು, ತಾಲೂಕಿನ ಹೋಬಳಿ ಕೇಂದ್ರಗಳಿಗೆ ತಲಾ 1 ಸಾವಿರದಂತೆ 5 ಸಾವಿರ ಮನೆಗಳು, ಪುರಸಭೆ ವ್ಯಾಪ್ತಿಗೆ 1500 ಮನೆಗಳು 2.50 ಲಕ್ಷ ರೂಗಳ ಸಹಾಯಧನದೊಂದಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ಮಂಜೂರಾಗಿದ್ದು, ಮುಂದಿನ ಎರಡೂವರೆ ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ಈ ಭಾಗವು ಸತತ ಬರಗಾಲ ಪೀಡಿತ ಪ್ರದೇಶವಾಗಿದೆ. ಎರಡು ಪ್ರಮುಖ ಖಾತೆಗಳನ್ನು ಹೊಂದಿರುವ ಡಿಸಿಎಂ ಗೋವಿಂದ ಕಾರಜೋಳರವರು ಈ ಭಾಗಕ್ಕೆ ಹೆಚ್ಚಿನ ಪ್ರೀತಿ, ವಿಶ್ವಾಸ ತೋರಲಿ ಎಂದರು.
ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ ಮಧುಗಿರಿ ಕ್ಷೇತ್ರವು ಸತತ ಬರಗಾಲಕ್ಕೆ ತುತ್ತಾಗಿದ್ದು, ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಬ್ಬರೂ ಮಂತ್ರಿಗಳು ಹೆಚ್ಚಿನ ಅನುಧಾನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದ ನರಸಿಂಹಯ್ಯ, ಸಿಇಓ ಶುಭ ಕಲ್ಯಾಣ್, ಎಂಎಲ್ಸಿ ತಿಪ್ಪೇಸ್ವಾಮಿ, ತಾ.ಪಂ. ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಲೋಕೋಪಯೋಗಿ ಇಲಾಖೆಯ ಇಇ ವಿರುಪಾಕ್ಷಪ್ಪ, ಎಇಇ ಹೊನ್ನೇಶಯ್ಯ, ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ, ತಹಶೀಲ್ದಾರ್ ಡಾ. ವಿಶ್ವನಾಥ್, ಇಓ ದೊಡ್ಡಸಿದ್ದಯ್ಯ, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು ಇದ್ದರು.