ಮಧುಗಿರಿ :
ಮಧುಗಿರಿ ತಾಲ್ಲೂಕು ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಸಿ.ರೊಪ್ಪ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಸದರಿ ಗ್ರಾಮವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ 70 ವಾಸದ ಮನೆಗಳಿದ್ದು, 334 ಜನಸಂಖ್ಯೆ ಹೊಂದಿದ್ದು ಪೂರ್ಣ ಗ್ರಾಮವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಸದರಿ ಗ್ರಾಮವನ್ನು ಪರಿವೀಕ್ಷಣೆ ಮಾಡಿದ ಸಿಇಓ ಅವರು ಗ್ರಾಮದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿ ಹಾಜರಿದ್ದ ಆರೋಗ್ಯ, ಕಂದಾಯ ಮತ್ತು ಪಂಚಾಯಿತಿ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡಲು ಸೂಚನೆ ನೀಡಿದ ಅವರು ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಇಂದಿರಾ ದೇನಾನಾಯ್ಕ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.