ಗುಬ್ಬಿ:
ಮದುವೆ ಊಟ ಸೇವಿಸಿದ್ದ 16 ಮಂದಿ ವಾಂತಿ ಬೇದಿಯಿಂದ ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲೇ ನಡೆದ ಸರಳ ಮದುವೆಯಲ್ಲಿ ಊಟ ತಿಂಡಿ ಸೇವಿಸಿ ನೀರು ಕುಡಿದವರಿಗೆ ಈ ರೀತಿಯ ಸಮಸ್ಯೆಯಾಗಿದ್ದು ವಾಂತಿ ಬೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದಲ್ಲಿನ ಶುಧ್ದ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದ್ದು ಟ್ಯಾಂಕರ್‍ನಿಂದ ಮದುವೆಗೆ ಬಳಸಿದ ನೀರು ಈ ಸಮಸ್ಯೆಗೆ ಕಾರಣವಾಗಿರಬಹುದೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೊರೋನಾ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನ ಸೇರಿಸಿಕೊಂಡು ಮದುವೆ ಮಾಡುವುದು ಸಾಮಾಜಿಕ ಅಂತರ ಕಾಪಾಡದಿರುವುದು, ಶುಧ್ದಕುಡಿಯುವ ನೀರು ಬಳಕೆ ಮಾಡದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತಿರುವ ಬಗ್ಗೆ ತಿಳಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಅವರ ನೇತೃತ್ವದ ತಂಡ ಅಸ್ವಸ್ಥಗೊಂಡಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡಿದರು. ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡಿದ ಬಳಿಕ ಕುಡಿಯುವ ನೀರು ಮತ್ತು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದರು.
ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಿಕ್ಕಮ್ಮ, ಪಿಡಿಓ ವೆಂಕಟರಂಗಯ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಮಂಜುನಾಥ್, ಮುಖಂಡ ಜುಂಜೇಗೌಡ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಭೇಟಿ ನೀಡಿ ವೈದ್ಯರಿಗೆ ಸಹಕಾರ ನೀಡಿದರು.