ತುಮಕೂರು:
ಕೊರೊನಾ ಮಹಾಮಾರಿಯಿಂದ ಪಾರಾಗುವ ಸಲುವಾಗಿ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸ್ಯಾನಿಟೈಜೇಶನ್, ಕಲ್ಪಶುದ್ಧಿ ಸ್ಯಾನಿಟರಿ ಘಟಕ (ಗೇಟ್ ವೇ)ವನ್ನು ಸ್ಥಾಪಿಸಲಾಗಿದೆ.
ಈ ಕಲ್ಪಶುದ್ಧಿ ಸ್ಯಾನಿಟರ್ ಘಟವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉದ್ಘಾಟಿಸಿದರು.
ಸಂಜೀವಿನಿ ರಕ್ತನಿಧಿ ಕೇಂದ್ರದ ಅರುಣ್‍ಕುಮಾರ್ ಕೊಡುಗೆಯಾಗಿ ನೀಡಿರುವ ಸ್ಯಾನಿಟೈಸ್ ಗೇಟ್ ವೇಯನ್ನು ಎಸ್‍ಐಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಚಿದಾನಂದ್ ಸ್ಥಾಪಿಸಿದ್ದು, ಮಠಕ್ಕೆ ಬರುವ ಭಕ್ತಾದಿಗಳಿಗೆ ಸ್ವಯಂ ಚಾಲಿತವಾಗಿ ಈ ಘಟಕದ ಉಪಕರಣ ಸ್ಯಾನಿಟೈಸ್ ಮಾಡಲಿದೆ.
ಈ ಘಟಕ ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕ್ಯಾತ್ಸಂದ್ರದಿಂದ ಶ್ರೀಮಠಕ್ಕೆ ಪ್ರವೇಶ ಪಡೆಯುವ ವಸ್ತುಪ್ರದರ್ಶನದ ಮುಂಭಾಗದ ಗೇಟ್ ಬಳಿ ಈ ಸ್ಯಾನಿಟೈಸ್ ಗೇಟ್ ವೇ ಸ್ಥಾಪಿಸಲಾಗಿದೆ. ಈ ಬೂತ್‍ನಲ್ಲಿನ ಉಪಕರಣ ಮನುಷ್ಯನಿಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸ್ ಹಾಕುವ ಅವಶ್ಯಕತೆ ಇಲ್ಲ ಎಂದರು.
ಮಠಕ್ಕೆ ಬರುವ ಭಕ್ತಾದಿಗಳಿಗೆ ಈ ಗೇಟ್‍ನಲ್ಲೆ ಥರ್ಮಲ್ ಸ್ಕ್ಯಾನಿಂಗ್ ಸಹ ಮಾಡಲಾಗುವುದು ಎಂದು ಅವರು ಹೇಳಿದರು.
ಶ್ರೀಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯಾಗಿ ಮಾಸ್ಕ್ ಧರಿಸಿರಬೇಕು. ಜತೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಎಸ್‍ಐಟಿ ಕಾಲೇಜಿನ ಬಯೋಟೆಕ್ನಾಲಜಿಯ ವಿದ್ಯಾರ್ಥಿ ಚಿದಾನಂದ್ ಮತ್ತು ಸ್ನೇಹಿತರು ಒಟ್ಟಾಗಿ ಸೇರಿ ಕೊರೊನಾ ಸಂದರ್ಭದಲ್ಲಿ ಈ ಘಟಕ ಸ್ಥಾಪನೆ ಮಾಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಪ್ರತಿಯೊಬ್ಬ ಇಂಜಿನಿಯರ್‍ಗಳು ಸಹ ಪ್ರಾಯೋಗಿಕವಾಗಿ ಆಲೋಚಿಸಿ ಸಮಸ್ಯೆ ಬಂದಾಗ ಸಮಾಜಕ್ಕೆ ಕೊಡುಗೆ ನೀಡುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಎಲ್ಲ ತಾಂತ್ರಿಕ ಹಿನ್ನೆಲೆಯುಳ್ಳವರಿಗೆ ಈ ಕಾರ್ಯ ಮಾದರಿಯಾಗಿದೆ ಎಂದರು.
ಸ್ಯಾನಿಟೈಸ್ ಗೇಟ್ ವೇ ಬಹಳ ಹೆಚ್ಚು ಜನಸಂದಣಿ ಇರುವ ಮಾಲ್, ಚಿತ್ರಮಂದಿರ ಹಾಗೂ ದೇವಸ್ಥಾನಗಳಲ್ಲಿ ಅತ್ಯವಶ್ಯಕವಾಗಿದೆ. ಈ ಘಟಕದ ಸೌಲಭ್ಯವನ್ನು ಶ್ರೀಮಠಕ್ಕೆ ಬರುವ ಎಲ್ಲ ಭಕ್ತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್‍ಐಟಿ ಕಾಲೇಜಿನ ಸಿಇಓ ಶಿವಕುಮಾರಯ್ಯ ಮಾತನಾಡಿ, ನಮ್ಮ ಕಾಲೇಜಿನ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿ ಚಿದಾನಂದ್ ಕೊರೊನಾ ಸಂದರ್ಭದಲ್ಲಿ ಜೈವಿಕ ಸ್ಯಾನಿಟೈಸರ್‍ನ್ನು ಕಂಡು ಹಿಡಿದು ಪ್ರಥಮ ಬಾರಿಗೆ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯ ಮುಂಭಾಗದಲ್ಲಿ ಅಳವಡಿಸಿದ್ದರು. ಈಗ ಶ್ರೀಮಠದ ಆವರಣದಲ್ಲಿ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಉಚಿತವಾಗಿ ಈ ಘಟಕವನ್ನು ಅಳವಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಪಾಠ, ಪ್ರವಚನಕ್ಕೆ ಸೀಮಿತವಾಗದೆ ಸಮಾಜಕ್ಕೆ ಅತ್ಯವಶ್ಯಕವಾಗಿರುವ ಕೊಡುಗೆಯನ್ನು ನೀಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಚಿದಾನಂದ್ ಮತ್ತು ಸ್ನೇಹಿತರು ಕಾರ್ಯೋನ್ಮುಖರಾಗಿದ್ದಾರೆ. ಇವರ ಕಾರ್ಯಕ್ಷಮತೆ ಯುವ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್‍ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ, ಪ್ರಾಂಶುಪಾಲರಾದ ಶಿವಾನಂದ್, ಪುನೀತ್, ಅರುಣ್‍ಕುಮಾರ್, ಚಿದಾನಂದ್, ಸುರೇಶ್, ಗೌರಿಶಂಕರ್, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.