ತುಮಕೂರು:

      ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‍ಗೆ 10,300 ರೂ.ನಂತೆ ಉಂಡೆ ಕೊಬ್ಬರಿಯನ್ನು ಖರೀದಿಸಲಿದ್ದು, ಜೂನ್ 18 ರಿಂದ ಜುಲೈ 4ರವರೆಗೆ ರೈತರು ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜುಲೈ 6 ರಿಂದ ಜಿಲ್ಲೆಯಲ್ಲಿ ತೆರೆದಿರುವ 9 ಖರೀದಿ ಕೇಂದ್ರಗಳಲ್ಲಿ ನೋಂದಾಯಿತ ರೈತರಿಂದ ಉಂಡೆ ಕೊಬ್ಬರಿಯನ್ನು ಖರೀದಿಸಲಾಗುವುದು ಎಂದರು.

      ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಪಟೂರು, ಗುಬ್ಬಿ, ತುರುವೇಕೆರೆ, ತುಮಕೂರು, ಕುಣಿಗಲ್, ಶಿರಾ, ಚೇಳೂರಿನ ಎಪಿಎಂಸಿ ಪ್ರಾಂಗಣದಲ್ಲಿ 9 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ತಮ್ಮ ಹೆಸರನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರಗಳಿಗೆ ಮೂಲ ಆಧಾರ್ ಕಾರ್ಡ್ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದ  FRUITS  ನವೆಂಬರ್‍ನೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ರೈತರಿಂದ ಪ್ರತಿ ಎಕರೆಗೆ 6 ಕ್ವಿಂಟಾಲ್‍ನಂತೆ ಗರಿಷ್ಠ 20 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸಲಾಗುವುದು. ಹೀಗೆ ರೈತರಿಂದ ಖರೀದಿಸಿದ ಉಂಡೆ ಕೊಬ್ಬರಿಯನ್ನು ದಾಸ್ತಾನು ಮಾಡಲು ಅಗತ್ಯ ದಾಸ್ತಾನು ಮಳಿಗೆಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

      ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಜಮೆ ಮಾಡಲಾಗುವುದು ಎಂದ ಅವರು, ಬೆಂಬಲ ಯೋಜನೆಯಡಿ ರೈತರಿಂದ ಕೊಬ್ಬರಿಯನ್ನು ಖರೀದಿಸುವಾಗ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆಯನ್ನು ಮಾಡಬೇಕು ಎಂದರು.

      ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಬರುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೆಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

      ಸಭೆಯಲ್ಲಿ ಎಪಿಎಂಸಿ ಇಲಾಖೆಯ ಉಪನಿರ್ದೇಶಕ ದ್ವಾರಕ ಪ್ರಸಾದ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು ಸೇರಿದಂತೆ ಎಪಿಎಂಸಿ ಹಾಗೂ ಉಗ್ರಾಣ ನಿಗಮಗಳ ಅಧಿಕಾರಿಗಳು ಹಾಜರಿದ್ದರು. 

(Visited 18 times, 1 visits today)