ತುಮಕೂರು:

      ನಗರದ ಅತ್ಯಂತ ದೊಡ್ಡ ಪಾರ್ಕ್ ಗೋಕುಲ ಬಡಾವಣೆಯಲ್ಲಿರುವ ಗೂಬೆಹಳ್ಳ ಪಾರ್ಕ್‍ನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದರು.

      ನಗರದ ಗೋಕುಲ ಬಡಾವಣೆಯ ಕನಕಾಂಬರ ರಸ್ತೆ (9)ನೇ ಉದ್ಯಾನವನದಲ್ಲಿ ಪ್ರಜ್ಞಾ-ಗೋಕುಲ ಬಡಾವಣೆ ಮೊದಲ ಹಂತದ ನಾಗರೀಕ ಸಮಿತಿ ವತಿಯಿಂದ ಪರಿಸರ ದಿನದ ಅಂಗವಾಗಿ ಗುರುವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋಕುಲ ಬಡಾವಣೆಯ ಸುಮಾರು 2 ಎಕರೆ ವಿಸ್ತೀರ್ಣವುಳ್ಳ ಗೂಬೆಹಳ್ಳ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಟ್ರೀ-ಪಾರ್ಕ್ ನಿರ್ಮಾಣ, ಮಕ್ಕಳ ಆಟದ ಮೈದಾನ, ಜಿಮ್, ಸಣ್ಣ ಪಾಂಡ್ ನಿರ್ಮಾಣ ಮಾಡುವ ಯೋಜನೆ ಇದೆ. ಇಲ್ಲಿ ಹೆಚ್ಚು ಮರಗಿಡಗಳನ್ನು ಬೆಳೆಸುವ ಉದ್ಧೇಶ ಹೊಂದಲಾಗಿದೆ ಎಂದರು.

      ಗೂಬೆಹಳ್ಳ ಪಾರ್ಕ್‍ನಲ್ಲಿ ಕುಡುಕರ ಹಾವಳಿ ಹೆಚ್ಚಿದೆ ಎಂಬುದಾಗಿ ಕೇಳಿ ಬಂದಿದ್ದು, ಪಾರ್ಕ್‍ನ್ನು ಈ ಭಾಗದ ಜನರೇ ರಕ್ಷಿಸಿಕೊಳ್ಳಬೇಕು, ಎಲ್ಲವನ್ನೂ ಮಹಾನಗರಪಾಲಿಕೆ ಮಾಡಲು ಸಾಧ್ಯವಿಲ್ಲ, ಕುಡುಕರ ಹಾವಳಿ ನಿಯಂತ್ರಣಕ್ಕೆ ಇಲ್ಲಿನ ನಾಗರೀಕ ಸಮಿತಿಯವರು ಸೆಕ್ಯುರಿಟಿ ಗಾರ್ಡ್ ನೇಮಿಸಿಕೊಂಡು ಪಾರ್ಕ್ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

      ಗೋಕುಲ ಬಡಾವಣೆಯನ್ನು ಪೈಲೆಟ್ ಪಾಜೆಕ್ಟ್ ಆಗಿ ತೆಗೆದುಕೊಂಡು ಈ ಭಾಗದಲ್ಲಿ ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ
ಕಾರ್ಯ ಆರಂಭಿಸಲಾಗಿದೆ. ಇದು ಮುಗಿಯುವ ಹಂತಕ್ಕೆ ತಲುಪಿದೆ. ಈ ಭಾಗಕ್ಕೆ ಏನು ಸೌಲಭ್ಯ ಬೇಕೋ ಅದನ್ನು ಒದಗಿಸಲು ಮಹಾನಗರಪಾಲಿಕೆ ಸಿದ್ಧವಿದೆ. ಗೋಕುಲ ಬಡಾವಣೆ ಮಾದರಿ ಬಡಾವಣೆಯಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

      ಇದೇ ವೇಳೆ ನಾಗರೀಕ ಸಮಿತಿಯ ಪದಾಧಿಕಾರಿಗಳು 32ನೇ ವಾರ್ಡಿನ 9ನೇ ಕನಕಾಂಬರ ರಸ್ತೆಯಲ್ಲಿರುವ ಉದ್ಯಾನವನಕ್ಕೆ ನಿಗಧಿಪಡಿಸಿರುವ ಸ್ಥಳದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ತಾತ್ಕಾಲಿಕವಾಗಿ ಬಿದಿರಿನ ಬೇಲಿಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಉದ್ಯಾನವನಕ್ಕೆ ಮಹಾನಗರಪಾಲಿಕೆ ವತಿಯಿಂದ ತಂತಿಬೇಲಿ ಅಳವಡಿಸಿಕೊಡಬೇಕೆಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರಿಗೆ ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯ ಬಿ.ಜಿ.ಕೃಷ್ಣಪ್ಪ, ಸಮಿತಿಯ ಅಧ್ಯಕ್ಷರಾದ ಎ.ಚಲುವರಾಜ್, ನಿರ್ದೇಶಕ ಮಂಜುನಾಥ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಬೆಸ್ಕಾಂ ಸಹಾಯಕ ವಿಭಾಗೀಯ ನಿಯಂತ್ರಣಾಧಿಕಾರಿ ಅಭಿಲಾಷ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‍ಕುಮಾರ್, ವಲಯ ಅರಣ್ಯಾಧಿಕಾರಿ ಪವಿತ್ರ, ಸಮಿತಿ ಮಾಜಿ ಅಧ್ಯಕ್ಷ ಡಾ.ಪದ್ಮಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

(Visited 22 times, 1 visits today)