ತುಮಕೂರು :

      ಜಿಲ್ಲೆಯಲ್ಲಿ ಜೂನ್ 25ರಿಂದ ಜುಲೈ 2ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗಬಾರದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

       ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆ ಯಶಸ್ವಿಯಾಗಿರುವಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸಮಪರ್ಕವಾಗಿ, ವ್ಯವಸ್ಥಿತವಾಗಿ ಮಾಡಬೇಕು. ಮಕ್ಕಳು ಭಯಪಡದೇ ಪರೀಕ್ಷೆ ಬರೆಯುವಂತಾಗಬೇಕು. ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮನೆಯಿಂದಲೇ ಬಿಸಿ ನೀರನ್ನು/ಬಿಸಿ ಆರಿದ ನೀರು ತರುವಂತೆ ತಿಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.

       ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಒಂದು ದಿನದ ಮೊದಲೇ ಕೊಠಡಿಗಳ ವಿವರಗಳನ್ನು ಮೊಬೈಲ್‍ಗೆ ಸಂದೇಶ ಕಳುಹಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಎನ್‍ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಾರ್ಗದರ್ಶನ ನೀಡಲಾಗುವುದು ಹಾಗೂ ಮಾರ್ಗದರ್ಶಕ ಫಲಕಗಳನ್ನು ಅಳವಡಿಸಲಾಗುವುದು. ಮಕ್ಕಳಿಗೆ ಭೀತಿ ಸೃಷ್ಟಿ ಮಾಡಬೇಡಿ, ಭಯದ ವಾತಾವರಣ ದೂರ ಮಾಡಿ, ಸಮಾಧಾನವಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ಅವರು ತಿಳಿಸಿದರು.

       ಪರೀಕ್ಷಾ ಕೇಂದ್ರದಿಂದ ದೂರವಿರುವ ಮಕ್ಕಳ ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮಕ್ಕಳು ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪ್ರಯಾಣಕ್ಕೆ ತೊಂದರೆಯಾಗಿ ಗೈರು ಹಾಜರಾಗುವ ಮಕ್ಕಳನ್ನು ಸರ್ಕಾರಿ ಇಲಾಖೆ ವಾಹನಗಳ ಮೂಲಕ ಕರೆತರಬೇಕು. ತಡವಾಗಿ ಬಂದರೂ ಸಹ ಮಕ್ಕಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಶಿಕ್ಷಕರನ್ನು ನೇಮಿಸಬೇಕು ಎಂದರಲ್ಲದೇ ಮೊದಲ ದಿನದಿಂದ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕೂರುವ ಜಾಗವನ್ನು ಬದಲಾಯಿಸಬಾರದೆಂದು ಅವರು ಡಿಡಿಪಿಐಗಳಿಗೆ ಸೂಚಿಸಿದರು.

      ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳಿರಬೇಕು. ಪ್ರಥಮ ಚಿಕಿತ್ಸೆ ಪ್ಯಾರಾಸಿಟಮಾಲ್ ಮಾತ್ರೆ ಸೇರಿದಂತೆ ಆರೋಗ್ಯ ಪರಿಕರಗಳನ್ನು ಕೇಂದ್ರಗಳಲ್ಲಿ ಒದಗಿಸಬೇಕು. ನೇಮಿಸಿರುವ ಆರೋಗ್ಯ ಸಿಬ್ಬಂದಿಗಳ ವಿವರಗಳನ್ನು ಆಯಾ ತಾಲೂಕು ಬಿಇಒಗಳಿಗೆ ನೀಡಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಡಿಹೆಚ್‍ಒ ಅವರಿಗೆ ಸೂಚಿಸಿದರು.
ಕಂಟೈನ್ಮೆಂಟ್ ವಲಯದಿಂದ ಪರೀಕ್ಷೆಗೆ ಬರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗುವುದು.

      ಪರೀಕ್ಷಾ ಆವರಣ ಕೊಠಡಿಗಳಲ್ಲಿ ಮೊಬೈಲ್ ಫೋನ್‍ಗಳನ್ನು ನಿಷೇಧಿಸಲಾಗಿದೆ. ಜ್ವರ ಬಂದಿರುವ ಮಕ್ಕಳಿಗೆ ಮುಂಜಾಗ್ರತೆವಹಿಸಿ ಪರೀಕ್ಷೆ ಬರೆಸಲಾಗುವುದು. ಸಾಧ್ಯವಾದಷ್ಟು ಮನೆಯ ಆಹಾರ ಪದಾರ್ಥಗಳನ್ನು ಬಳಸಬೇಕು. ಪರೀಕ್ಷೆ ಬರೆದು ಕ್ಷೇಮವಾಗಿ ಮನೆಗೆ ತೆರೆಳುತ್ತಾರೆ ಆದ್ದರಿಂದ ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೋಷಕರು ಗುಂಪು ಸೇರದಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

      ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಬೇಕು. ಕೊರತೆಯಿದ್ದರೆ ಸಂಬಂಧಿಸಿದವರಿಗೆ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ಬಗ್ಗೆ ತಂದು ಸರಿಪಡಿಸಲು ಕ್ರಮವಹಿಸಬೇಕು ಎಂದರು.

      ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಕೊರತೆಯಾಗದಂತೆ ಆರಾಮವಾಗಿ ಪರೀಕ್ಷೆ ಬರೆಯಲು ಡೆಸ್ಕ್‍ಗಳನ್ನು ಹಾಕಬೇಕು. ಆರೋಗ್ಯ ಸಿಬ್ಬಂದಿಗಳು ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಬೇಕು. ಕೋವಿಡ್ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಮಾದರಿ ಪರೀಕ್ಷಾ ಕೇಂದ್ರದ ಮಾಕ್ ವಿಡಿಯೋವನ್ನು ಪ್ರದರ್ಶಿಸಲಾಗಿದೆ ಎಂದು ಅವರು ತಿಳಿಸಿದರು.

      ಪರೀಕ್ಷಾ ಸಿದ್ಧತೆಯ ಕ್ರಮಗಳ ಬಗ್ಗೆ ಸಚಿವರು ಕೇಳಿದಾಗ, ಇದಕ್ಕೆ ಉತ್ತರಿಸಿದ ಡಿಡಿಪಿಐ ಕಾಮಾಕ್ಷಿ ಅವರು, ದಕ್ಷಿಣ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ 23783 ಇದರಲ್ಲಿ ಬಾಲಕರು 13195 ಬಾಲಕಿಯರು 10585 ಹಾಗೂ ಮಧುಗಿರಿ ಶೈಕ್ಷಣಿಕ ವಿಭಾಗದಲ್ಲಿ ಒಟ್ಟು 13202 ವಿದ್ಯಾರ್ಥಿಗಳ ಪೈಕಿ ಬಾಲಕರು 7022 ಬಾಲಕಿಯರು 6180 ವಿದ್ಯಾರ್ಥಿಗಳು 144 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರೇವಣ ಸಿದ್ಧಪ್ಪ ಮಾತನಾಡಿ, ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿ ಕೇಂದ್ರಕ್ಕೆ 200 ವಿದ್ಯಾರ್ಥಿಗಳಿಗೆ ಒಂದರಂತೆ ಥರ್ಮಲ್ ಸ್ಕ್ರೀನಿಂಗ್ ಯಂತ್ರವನ್ನು ಪರೀಕ್ಷಾ ಮಂಡಳಿ ವತಿಯಿಂದ ಸರಬರಾಜು ಮಾಡಲಾಗುತ್ತಿದೆ. ಕೊಠಡಿಗೆ 18-20 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿದ್ದು, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಸಚಿವರಿಗೆ ಮಾಹಿತಿ ನೀಡಿದರು.

      ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಪರೀಕ್ಷಾ ಕೇಂದ್ರಗಳಿವೆ. ಕೇಂದ್ರದಲ್ಲಿ ಮೂಲಭೂತ ಸೌಕರ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗೆ ಸ್ಯಾನಿಟೈಸ್, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳು/ಪೋಷಕರಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲದೇ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯ ಸೂಚನೆಯಂತೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಸಚಿವರ ಗಮನಕ್ಕೆ ತಂದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲೂಕು ತಹಶೀಲ್ದಾರ್‍ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

(Visited 37 times, 1 visits today)