ಗುಬ್ಬಿ :
ಹಸಿರು ವಲಯ ಎನಿಸಿಕೊಳ್ಳುವ ಹಂತದಲ್ಲಿದ್ದ ಗುಬ್ಬಿ ತಾಲ್ಲೂಕಿಗೆ ಕಳೆದ 24 ತಾಸುಗಳಲ್ಲೇ ಎರಡು ಕೊವೀಡ್-19 ಪ್ರಕರಣ ದೃಢಪಟ್ಟಿರುವ ಹಿನ್ನಲೆ ಕಂಟೋನ್ಮೆಂಟ್ ಏರಿಯಾಗಳಾಗಿ ಚೇಳೂರು ಕಲ್ಯಾಣ ಮಂಟಪ ಹಾಗೂ ಪಟ್ಟಣದ ಸಮೀಪದ ಕಿಟ್ಟದಕುಪ್ಪೆ ಗ್ರಾಮ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಗುರುವಾರ ಸಂಜೆ ಸಮಯದಲ್ಲಿ ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್ನಲ್ಲಿದ್ದ ದೆಹಲಿ ಮೂಲದ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟೀವ್ ದೃಢವಾಗಿದೆ. ದೆಹಲಿಯಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ ಈ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಎಷ್ಟೇನೂ ಕಷ್ಟ ಎನಿಸಿದಿದ್ದರೂ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಐಸೂಲೇಷನ್ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಶುಕ್ರವಾರ ಮುಂಜಾನೆ ಗುಬ್ಬಿ ಪಟ್ಟಣದ ನಾಗರೀಕರಲ್ಲಿ ಆತಂಕ ಮೂಡಿಸಿದ ಕಿಟ್ಟದಕುಪ್ಪೆ ಗ್ರಾಮದ ಪಾಸಿಟೀವ್ ವ್ಯಕ್ತಿಯ ಟ್ರಾವಲ್ ಹಿಸ್ಟರಿ ತೀವ್ರ ತಲೆ ನೋವಾಗಿದೆ.
ಕಿಟ್ಟದಕುಪ್ಪೆ ಮೂಲದ ಸುಮಾರು 55 ವರ್ಷದ ವ್ಯಕ್ತಿ ಹೃದಯ ಸಂಬಂಧಿ ರೋಗಕ್ಕೆ ಔಷಧ ತರಲು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕಳೆದ 4 ನೇ ತಾರೀಖು ತೆರಳಿದ್ದು ನಂತರ ಸ್ವಗ್ರಾಮಕ್ಕೆ ತೆರಳಿದ ಬಳಿಕ ಕಾಣಿಸಿಕೊಂಡ ಅನಾರೋಗ್ಯ ಚಿಕಿತ್ಸೆಗೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿನ ಖಾಸಗಿ ಕ್ಲಿನಿಕ್ಗೆ ತೆರಳಿದ್ದರು. ಎರಡು ಬಾರಿ ಚಿಕಿತ್ಸೆಗೆ ಓಡಾಡಿದ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಇದೇ ತಿಂಗಳ 14 ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢವಾಗಿದೆ. ನಂತರದಲ್ಲಿ ಕಿಟ್ಟದಕುಪ್ಪೆ ಗ್ರಾಮವನ್ನು ಸೀಲ್ ಮಾಡಲಾಗಿದೆ. ಕಡಬ, ಬೆಲವತ್ತ, ಹೊದಲೂರು, ತೊರೇಹಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯನ್ನೂ ಸಹ ಬಂದ್ ಮಾಡಲಾಗಿದೆ.
ಸೋಂಕಿತನ ಮನೆಯು ಗ್ರಾಮದ ಮಧ್ಯೆ ಇರುವ ಕಾರಣ ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಿ ಗ್ರಾಮಸ್ಥರಿಗೆ ಅವಶ್ಯಕತೆಯನ್ನು ತಾಲ್ಲೂಕು ಆಡಳಿತ ಒದಗಿಸುವ ಜತೆಗೆ ಗ್ರಾಮಸ್ಥರ ರಾಸುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡುತ್ತಿದೆ. ಈಗಾಗಲೇ ಪ್ರಾಥಮಿಕ ಸಂಪರ್ಕದ 32 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ. ಅಡುಗೆ ಕಂಟ್ರಾಕ್ಟರ್ ವೃತ್ತಿ ನಡೆಸಿದ್ದ ಸೋಂಕಿತನ ಸಂಪರ್ಕಗಳನ್ನು ಪತ್ತೆ ಮಾಡುವುದು ಸಾಹಸವಾಗಿದೆ. ಈಚೆಗೆ ಮೂರು ಮದುವೆಯಲ್ಲಿ ಅಡುಗೆ ತಯಾರಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಇವರ ಎರಡನೇ ಸಂಪರ್ಕ ಪತ್ತೆಯಂತೂ ಸುಲಭವಲ್ಲವಾಗಿದೆ. ಈ ಜತೆಗೆ ಸೋಂಕಿನ ಸಹೋದರ ಸಾವು ತಾಲ್ಲೂಕಿನ ಜನರಲ್ಲಿ ಮತ್ತಷ್ಟು ಆತಂಕ ತಂದಿದೆ. ಅನಾರೋಗ್ಯದಿಂದ ಬಳಲಿದ್ದ ಸೋಂಕಿತನ ಸಹೋದರನ ಶವ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎನ್ನಲಾಗಿದೆ.
ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಸಿಪಿಐ ಸಿ.ರಾಮಕೃಷ್ಣಯ್ಯ, ಪಿಎಸ್ಐ ಜ್ಞಾನಮೂರ್ತಿ ಸ್ಥಳದಲ್ಲೇ ಮೊಕ್ಕಂ ಹೂಡಿ ಸೀಲ್ಡೌನ್ ಕಾರ್ಯ ನಡೆಸಿದ್ದರು. ಗ್ರಾಮಸ್ಥರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ತಾಲ್ಲೂಕಿನ ಜನತೆ ಆತಂಕ ಪಡುವ ಅಗತ್ಯವಿಲ್ಲ. ಜಾಗೃತಿವಹಿಸಿ ಜವಾಬ್ದಾರಿ ತೋರಿದರೆ ವೈರಸ್ ಹರಡದಂತೆ ಕ್ರಮವಹಿಸಬಹುದಾಗಿದೆ ಎಂದು ತಾಲ್ಲೂಕು ಆಡಳಿತ ಮನವಿ ಮಾಡಿದೆ.