ತುಮಕೂರು:
ಜಿಲ್ಲೆಯ ಶಿರಾ ತಾಲ್ಲೂಕು ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀನಿವಾಸಪ್ಪ ಎಂಬ ರೈತ ತಮ್ಮ ಜಮೀನಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದರಿಂದ ಈತನ ಕುಟುಂಬಕ್ಕೆ 40ಸಾವಿರ ರೂ.ಗಳ ಆದಾಯ(ಕೂಲಿ ಹಣ) ದೊರೆತಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ರೈತ ಶ್ರೀನಿವಾಸಪ್ಪ ಅವರು ತಮಗಿರುವ 5 ಎಕರೆ ಜಮೀನಿನಲ್ಲಿ ಬದು ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಬದುಗಳಲ್ಲಿ ನೀರು ಶೇಖರಣೆಯಾಗಿ ತೇವಾಂಶ ಹೆಚ್ಚಿ ಕೃಷಿಯಲ್ಲಿ ಸುಮಾರು 10 ರಿಂದ 15ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದಲ್ಲದೆ ಬದುವಿನ ಮೇಲೆ ಗಿಡಗಳನ್ನು ನೆಟ್ಟು ಬದು ಬೇಸಾಯ ಸಹ ಮಾಡಬಹುದಾಗಿದೆ. ಈ ಕಾಮಗಾರಿಯಿಂದಾಗಿ ರೈತ ಕುಟುಂಬಕ್ಕೆ 146 ಮಾನವ ದಿನಗಳ ಸೃಜನೆಯಾಗುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಲ್ಲಿ ಯೋಜನೆಯು ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೃಷಿಹೊಂಡ ನಿರ್ಮಾಣದಿಂದ ಜಲ ಮರುಪೂರಣ :
ಅದೇ ರೀತಿ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಉದ್ದಯ್ಯನಪಾಳ್ಯ ಗ್ರಾಮದ ರೈತ ಹನುಮಂತರಾಯಪ್ಪ ಹೊಂದಿರುವ ತಮ್ಮ 4 ಎಕರೆ ಜಮೀನಿನಲ್ಲಿ ಹುಣಸೆ ಗಿಡಗಳನ್ನು ನಾಟಿ ಮಾಡಿಕೊಂಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಲಹೆಯಂತೆ ಇವರು ನರೇಗಾ ಯೋಜನೆಯಡಿ ತಮ್ಮ ಹೊಲದಲ್ಲಿ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಕೃಷಿ ಹೊಂಡ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಈ ಕಾಮಗಾರಿಯಿಂದ ಒಟ್ಟು 170 ಮಾನವ ದಿನಗಳ ಸೃಜನೆಯಾಗಿ 47 ಸಾವಿರ ರೂಪಾಯಿಗಳ ಕೂಲಿ ಹಣ ದೊರೆತಿದೆ. ಕೃಷಿ ಹೊಂಡ ನಿರ್ಮಾಣದಿಂದ ಮಳೆಗಾಲದಲ್ಲಿ ಸುಮಾರು 3 ಲಕ್ಷ ಲೀಟರ್‍ಗೂ ಅಧಿಕ ನೀರು ಸಂಗ್ರಹಣೆಯಾಗಿ ಹುಣಸೆ ಗಿಡಗಳಿಗೆ ನೀರು ಪೂರೈಕೆಯಾಗುವುದಲ್ಲದೆ ಇವರ ಜಮೀನಿನಲ್ಲಿರುವ ಕೊಳವೆಬಾವಿಗೂ ಜಲ ಮರುಪೂರಣವಾಗಲಿದೆ.
ಕೃಷಿ ಹೊಂಡದ ಸುತ್ತಲೂ ತಮ್ಮ ದನಕರುಗಳ ಮೇವಿಗಾಗಿ ಅಗಸೆ ಗಿಡ ಹಾಗೂ ಆಳ್ವಾನ್ ಗಿಡಗಳನ್ನು ಬೆಳೆಸಲಿದ್ದೇವೆ. ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣದಿಂದ ಸರ್ಕಾರದಿಂದ ಕೂಲಿ ಹಣವೂ ಸಿಕ್ಕಿತು, ನೀರಿನ ಸಮಸ್ಯೆಗೂ ಪರಿಹಾರ ಸಿಕ್ಕಂತಾಗಿದೆ ಎಂದು ರೈತ ಹನುಮಂತರಾಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಶುಭಾ ಕಲ್ಯಾಣ್ ತಿಳಿಸಿದ್ದಾರೆ.