ತುಮಕೂರು:

      ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 4ರವರೆಗೆ ತುಮಕೂರು(ದ) ಶೈಕ್ಷಣಿಕ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಒಟ್ಟು 144 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

      ಪರೀಕ್ಷೆಗೆ 37306 ವಿದ್ಯಾರ್ಥಿಗಳು ನೋಂದಣಿ: ತುಮಕೂರು ಶೈಕ್ಷಣಿಕ ಜಿಲ್ಲೆಯ 23783 ಹಾಗೂ ಮಧುಗಿರಿಯ 13523 ಸೇರಿದಂತೆ ಒಟ್ಟು 37306 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಈ ಪೈಕಿ ಜಿಲ್ಲೆಯ 20329 ಬಾಲಕರು ಹಾಗೂ 16977 ಬಾಲಕಿಯರಿದ್ದು, ಇವರಲ್ಲಿ 34366(ಪ್ರಥಮ ಪ್ರಯತ್ನ), 2082(ಪುನರಾವರ್ತಿತ), 587(ಖಾಸಗಿ), 204(ಖಾಸಗಿ ಪುನರಾವರ್ತಿತ), 67(ಪುನರಾವರ್ತಿತ ಹಳೆಯ) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

      144 ಪರೀಕ್ಷಾ ಕೇಂದ್ರ : ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ತುಮಕೂರಿನ 85 ಹಾಗೂ ಮಧುಗಿರಿಯ 59 ಸೇರಿದಂತೆ ಒಟ್ಟು 144 ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸ್ಯಾನಿಟೈಜೇಷನ್‍ಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ದೈಹಿಕ ಶಿಕ್ಷಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ವಯಂ ಸೇವಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸಹಕರಿಸಲಿದ್ದಾರೆ.
ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ಆರೋಗ್ಯ ತಪಾಸಣಾ ಕೇಂದ್ರವನ್ನು ತೆರೆದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವುದನ್ನು ಖಾತ್ರಿಪಡಿಸಿಕೊಂಡು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸ್ ಸೌಲಭ್ಯ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಯಿಂದಲೇ ಪ್ರವೇಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಕೊಠಡಿ ಹಂಚಿಕೆ ಮತ್ತು ಕಟ್ಟಡಗಳ ಮಾಹಿತಿಯನ್ನು ಸಂಬಂಧಿಸಿದ ಶಾಲೆಗಳ ಮೂಲಕ ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು. ಕೊಠಡಿ ಹಂಚಿಕೆಯ ಬಗ್ಗೆ ಜೂನ್ -24ರಂದು  ಮುಂಜಾಗ್ರತೆಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ನೋಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.

ತಾಲ್ಲೂಕುವಾರು ವಿದ್ಯಾರ್ಥಿಗಳ ವಿವರ :

      ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆ ಸೇರಿದಂತೆ ಒಟ್ಟು 723 ಶಾಲೆಗಳ 37306 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಯಿಂದ 144 ಪರೀಕ್ಷಾ ಕೇಂದ್ರ ಹಾಗೂ 17 ಬ್ಲಾಕ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತಾಲ್ಲೂಕುವಾರು ಪರೀಕ್ಷಾ ಕೇಂದ್ರಗಳ ವಿವರ ಇಂತಿದ್ದು, ಆವರಣದಲ್ಲಿ ಬ್ಲಾಕ್ ಪರೀಕ್ಷಾ ಕೇಂದ್ರಗಳ ವಿವರವನ್ನು ನೀಡಲಾಗಿದೆ. ಗುಬ್ಬಿ ತಾಲ್ಲೂಕು: 14 ಪರೀಕ್ಷಾ ಕೇಂದ್ರ(2), ಚಿಕ್ಕನಾಯಕನಹಳ್ಳಿ ತಾಲ್ಲೂಕು: 11 ಪರೀಕ್ಷಾ ಕೇಂದ್ರ, ಕುಣಿಗಲ್: 11(2), ತಿಪಟೂರು: 8, ತುಮಕೂರು: 33(2), ತುರುವೇಕೆರೆ: 8(1), ಕೊರಟಗೆರೆ: 12(4), ಮಧುಗಿರಿ: 16, ಪಾವಗಡ: 14(2), ಶಿರಾ: 17(3).

ನಿಷೇಧಾಜ್ಞೆ ಜಾರಿ :

      ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಅಳತೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ನಿಷೇಧಾವಧಿಯಲ್ಲಿ ಪರೀಕ್ಷಾ ದಿನಗಳಂದು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಾವುದೇ ಜೆರಾಕ್ಸ್ ಅಂಗಡಿ ಮತ್ತು ಸ್ಟೇಷನರಿ ಅಂಗಡಿಗಳನ್ನು ತೆರೆಯುವಂತಿಲ್ಲ.

      ಪರೀಕ್ಷೆಗೆ ಮುನ್ನ ಅಧ್ಯಯನಕ್ಕೆ ಅವಕಾಶ: ಪರೀಕ್ಷೆಯು ನಿಗಧಿತ ದಿನಾಂಕದಂದು ಬೆಳಿಗ್ಗೆ 10.30 ರಿಂದ ಆರಂಭವಾಗಲಿದ್ದು, ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಬೆಳಿಗ್ಗೆ 8-30 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸಿದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ 9.45ರವರೆಗೆ ಅಧ್ಯಯನ ಮಾಡಿಕೊಳ್ಳಲು ಅವಕಾಶವಿದ್ದು, 9-45ರ ನಂತರ ಕಡ್ಡಾಯವಾಗಿ ಪುಸ್ತಕಗಳನ್ನು ಕೊಠಡಿಯ ಹೊರಗೆ ನಿಗಧಿಪಡಿಸಿದ ಜಾಗದಲ್ಲಿಡಬೇಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಕಾಯಿಸಿ ಆರಿಸಿದ ನೀರನ್ನು ಮನೆಯಿಂದಲೇ ತರುವುದು ಸುರಕ್ಷಿತ. ಅವಶ್ಯಕತೆ ಇದ್ದಲ್ಲಿ ಊಟದ ಡಬ್ಬಿಯನ್ನು ಮನೆಯಿಂದಲೇ ತರಬಹುದಾಗಿದೆ.

ಸಾರಿಗೆ ಸೌಲಭ್ಯ:

      ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗವಿರುವ ಕಡೆಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಪರೀಕ್ಷಾ ಸಮಯಕ್ಕೆ ಅನುಗುಣವಾಗಿ ಸಂಚರಿಸುತ್ತವೆ. ಪ್ರವೇಶ ಪತ್ರ ತೋರಿಸಿದಲ್ಲಿ ಪ್ರಯಾಣ ಉಚಿತವಾಗಿರುತ್ತದೆ. ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗ ಇಲ್ಲದ ಕಡೆಗಳಲ್ಲಿ ಪೋಷಕರ ಕೋರಿಕೆ ಮೇರೆಗೆ ಖಾಸಗಿ ಶಾಲಾ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.

      ಯಾವುದೇ ವಿದ್ಯಾರ್ಥಿಯು ಸಮಸ್ಯೆಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಕರೆ ಮಾಡಬಹುದಾಗಿದ್ದು, ದೂರವಾಣಿ ಸಂಖ್ಯೆ ಇಂತಿದೆ. ಚಿಕ್ಕನಾಯಕನಹಳ್ಳಿ-9480695352, ಗುಬ್ಬಿ-9480695353, ಕುಣಿಗಲ್- 9480695355, ತಿಪಟೂರು-9480695359, ತುಮಕೂರು-9480695360, ತುರುವೇಕೆರೆ-9480695361, ಕೊರಟಗೆರೆ-9480695354, ಮಧುಗಿರಿ-9480695356, ಪಾವಗಡ-9480695357, ಶಿರಾ-9480695358. ಅದೇ ರೀತಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ತುಮಕೂರು ಡಿ.ಡಿ.ಪಿ.ಐ ದೂ.ಸಂ.-9448999352, ಮಧುಗಿರಿ ಡಿಡಿಪಿಐ-9448999347, ತುಮಕೂರು ಶಿಕ್ಷಣಾಧಿಕಾರಿ-9449126869, ಮಧುಗಿರಿ ಶಿಕ್ಷಣಾಧಿಕಾರಿ-9880541556ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 16 times, 1 visits today)