ಗುಬ್ಬಿ:
ತಾಲ್ಲೂಕಿನ ಚೇಳೂರು ಸಮೀಪದ ಅಂತಾಪುರ ಕೋಡಿ ಎಂಬ ಗ್ರಾಮದಲ್ಲಿ ಕಾಣಿಸಿಕೊಂಡ ಮೂರನೇ ಕೊರೋನಾ ಸೋಂಕಿತ ಪ್ರಕರಣ ಇಡೀ ತಾಲ್ಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್‍ನಲ್ಲಿದ್ದ ದೆಹಲಿ ಮೂಲದ ಕ್ರೇನ್ ಆಟರೇಟರ್ ಎತ್ತಿನಹೊಳೆ ಯೋಜನೆ ಕೆಲಸಕ್ಕೆ ಬರುವಾಗ್ಗೆ ಕೊರೋನಾ ವೈರಸ್ ಅಂಟಿಸಿಕೊಂಡು ಬಂದಿದ್ದು ತಾಲ್ಲೂಕಿಗೆ ಪಾದಾರ್ಪಣೆ ಎಂದೆನಿಸಿತು. ಈತನ ಸಂಪರ್ಕಕ್ಕೆ ಬಂದವರ ಸಂಖ್ಯೆ ಕಡಿಮೆ ಎನಿಸಿದ ಹಿನ್ನಲೆ ಜನರಲ್ಲಿ ಈ ಪ್ರಕರಣ ಬಗ್ಗೆ ಹೆಚ್ಚಿನ ಗಮನ ಸಿಗಿಲಿಲ್ಲ. ನಂತರ ಗುಬ್ಬಿ ಸಮೀಪದ ಕಿಟ್ಟದಕುಪ್ಪೆ ಗ್ರಾಮದಲ್ಲಿ ಕಾಣಿಸಿಕೊಂಡ ಅಡುಗೆ ತಯಾರಕನಲ್ಲಿನ ವೈರಸ್ ಪಾಸಿಟೀವ್ ಇಡೀ ತಾಲ್ಲೂಕಿಗೆ ಬೆಚ್ಚಿಬೀಳಿಸಿತ್ತು. ಮೂರು ದಿನದಲ್ಲೇ ಮೂರನೇ ಪ್ರಕರಣ ಅಂತಾಪುರ ಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಕಾಣಿಸಿರುವುದು ಸಮುದಾಯ ಹರಡುವಿಕೆಗೆ ಸಾಕ್ಷಿಯಾಗುತ್ತಿದೆ ಎಂಬ ಆತಂಕ ಮೂಡಿಸಿದೆ.
ಚೇಳೂರಿನಿಂದ ಶಿರಾ ಮಾರ್ಗ ಮಧ್ಯೆ ಸಿಗುವ 40 ಮನೆಯ ಅಂತಾಪುರ ಸಣ್ಣ ಗ್ರಾಮದಲ್ಲಿ ವಾಸವಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿಯೊರ್ವನಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಾಲೇಜು ರಜೆಯ ಹಿನ್ನಲೆ ಚೇಳೂರಿನ ಎಪಿಎಂಸಿಯಲ್ಲಿನ ಮಾವಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕ ಶಿರಾದಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದ ಕಾರಣ ಈ ಸೋಂಕು ಶಿರಾ ಮೂಲದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ 20 ನೇ ತಾರೀಖಿನಂದು ಗಂಟಲು ದ್ರವ ಪಡೆಯಲಾಗಿತ್ತು. ಪರೀಕ್ಷೆಯ ಬಳಿಕ ಕೋವಿಡ್-19 ವೈರಸ್ ದೃಢವಾಗಿದೆ. ಈತನ ಟ್ರಾವಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ. 18 ಮಂದಿ ಪ್ರಾಥಮಿಕ ಸಂಪರ್ಕ ಹಾಗೂ 28 ಮಂದಿ ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಗುರುತಿಸಲಾಗಿದೆ.
ದ್ವಿತೀಯ ಸಂಪರ್ಕದ 28 ಜನರಿಗೆ ಪ್ರಾಥಮಿಕ ಸಂಪರ್ಕದ 18 ಮಂದಿಯನ್ನು ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಇಡೀ ಗ್ರಾಮಸ್ಥರನ್ನು ವೈದ್ಯಕೀಯ ಪರೀಕೆಗೆ ಒಳಪಡಿಸಿ ಸ್ಯಾನಿಟೇಜರ್ ಮಾಡಿಸುವ ಕೆಲಸ ಕಂದಾಯ ಇಲಾಖಾಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ನಡೆಸಿದ್ದಾರೆ. ಇಡೀ ಸಣ್ಣ ಗ್ರಾಮ ಅಂತಾಪುರ ಕೋಡಿಯನ್ನು ಕಂಟೈನ್ಮೆಂಟ್ ಏರಿಯಾ ಎಂದು ಗುರುತಿಸಿ ಗ್ರಾಮವನ್ನೇ ಸುತ್ತವರಿದು ಪರದೆ ಅಳವಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ಇಲ್ಲಿನ ಜನರಿಗೆ ಮೂಲಭೂತ ವ್ಯವಸ್ಥೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.