ಹುಳಿಯಾರು:
ಭಾರತದ ಸನಾತನ ಸಂಸ್ಕೃತಿಯಲ್ಲಿ ಹೆಣ್ಣಿಗೆ ಹೆಚ್ಚು ಪ್ರಾಧ್ಯಾನ್ಯತೆ ಕೊಟ್ಟಿದ್ದು ಹೆಣ್ಣಿನಲ್ಲಿ ಸೃಷ್ಟಿಯ ಎಲ್ಲಾ ಗುಣಗಳು ಇರುತ್ತದೆ. ಆಕೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ನಿದರ್ಶನಗಳಿವೆ. ಸ್ತ್ರೀಯಲ್ಲಿ ಅಪಾರ ಶಕ್ತಿ, ಸಹನೆ, ಸಾಮಥ್ರ್ಯವಿರುವ ಕಾರಣ ಸ್ತ್ರೀರೂಪದಲ್ಲಿನ ಅಷ್ಟಲಕ್ಷ್ಮಿಯರನ್ನು ಪೂಜಿಸುತ್ತಾರೆಂದು ಹುಳಿಯಾರು ಪಿಎಸೈ ವಿಜಯ್ ಕುಮಾರ್ ನುಡಿದರು.
ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶುಭಸಂಕಲ್ಪ ದೀಪೋತ್ಸವ ಹಾಗೂ ಅಷ್ಟ ಚೈತನ್ಯ ಲಕ್ಷ್ಮಿಯರ ದಿವ್ಯ ದರ್ಶನ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಕೇವಲ ಹಣವಿದ್ದರೆ ಮಾತ್ರ ಸಾಲದು ಜೊತೆಗೆ ಮಾನಸಿಕ ಶಾಂತಿ, ಸಹನೆ ಎಂಬ ಸದ್ಗುಣಗಳ ಅವಶ್ಯಕತೆ ಇದೆ.ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಾಂತಿ ಪ್ರಶಾಂತತೆ ದೊರೆಯಲಿದ್ದು ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ ಎಂದರು.
ವರ್ತಕರಾದ ಪ್ರಭಾಕರ್ ರವರು ಮಾತನಾಡಿ ಜೀವನೋಪಾಯಕ್ಕಾಗಿ ಹಗಲಿರುಳು ಶ್ರಮಿಸಿ ಉದ್ಯೋಗದಲ್ಲಿ ತೊಡಗಿ ಸಂಪಾದಿಸಿದ ಹಣದಲ್ಲೇ ಆಂತರಿಕ ನೆಮ್ಮದಿ ಪಡೆಯಲು ಸಾಧ್ಯವಿಲ್ಲ.ಕೆಲವು ಕ್ಷಣವಾದರೂ ನೆಮ್ಮದಿ,ಶಾಂತಿಗಾಗಿ ಇಂತಹ ತಾಣಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ನಾವು ಆಚರಿಸುವ ಎಷ್ಟೋ ಹಬ್ಬ ಹರಿದಿನಗಳ ಆಧ್ಯಾತ್ಮಿಕ ಸಹಿತ ರಹಸ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ದೀಪೋತ್ಸವಕ್ಕೆ ದೀಪ ಬೆಳಗಿಸಿ ಶುಭ ನುಡಿದ ದೊಡ್ಡಎಣ್ಣೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಕ್ಕ ಮಹಿಳೆಯರಾಗಿ ಸರ್ವ ರಂಗದಲ್ಲಿಯೂ ಸಫಲತೆಯನ್ನು ಪಡೆಯುವುದಕ್ಕಾಗಿ ನಮ್ಮಲ್ಲಿ ಆಂತರಿಕ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು.ಸದಾ ಭಗವಂತನ ಸ್ಮರಣೆಯಿಂದ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದರು.
ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ.ಕೆ.ಗೀತಕ್ಕ ನವರು ದೀಪಾವಳಿಯ ಹಬ್ಬದ ಮಹತ್ವ,ಆಚರಣೆಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಷ್ಟ ಲಕ್ಷ್ಮಿಯರ ಪ್ರತಿರೂಪದಲ್ಲಿದ್ದ ಮಹಿಳೆಯರು ಉಪಸ್ಥಿತರಿದ್ದು ಸರ್ವರಿಗೂ ಆಶೀರ್ವಾದ,ವರದಾನಗಳನ್ನು ನೀಡಿದರು. ಪ್ರೇಮಕ್ಕನವರ ಅಂಜನಾದ್ರಿ ಭಜನಾ ಮಂಡಳಿಯವರು ಲಕ್ಷ್ಮಿ ಮಹಿಮೆ ಕುರಿತು ಭಜನೆ ಮಾಡಿದರು.