ಗುಬ್ಬಿ:
ತಾಲ್ಲೂಕಿನ ಕಸಬ ಹೋಬಳಿ ಜವರೇಗೌಡನಪಾಳ್ಯ ಗ್ರಾಮದಲ್ಲಿನ ಕಚ್ಚಾ ರಸ್ತೆ ಮಳೆ ಬಂದು ಸಂಪೂರ್ಣ ಓಡಾಟಕ್ಕೂ ಯೋಗ್ಯವಲ್ಲದಂತಾಗಿ ಗ್ರಾಮವೇ ಸೀಲ್‍ಡೌನ್ ಆಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇಡೀ ಗ್ರಾಮದಲ್ಲಿ ಎಲ್ಲರ ಮನೆಯ ಸಂಪರ್ಕಿಸುವ 600 ಮೀಟರ್ ಮುಖ್ಯರಸ್ತೆ ಸೇರಿದಂತೆ ನಾಲ್ಕು ಗಲ್ಲಿ ರಸ್ತೆಗಳು ಸಂಪೂರ್ಣ ಕಚ್ಚಾ ರಸ್ತೆಯಾಗಿದೆ. 12 ಅಡಿಗಳ ಈ ರಸ್ತೆ ಮಣ್ಣಿನಿಂದ ಕೂಡಿ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಮಳೆ ಬಂದರೆ ಯಾರೊಬ್ಬರು ಓಡಾಡಲು ಆಗದ ದುಸ್ಥಿತಿಯಲ್ಲಿದೆ. ಕಳೆದ 20 ವರ್ಷದಿಂದ ಇದೇ ಅವ್ಯವಸ್ಥೆ ಅನುಭವಿಸಿರುವ ಗ್ರಾಮಸ್ಥರು ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನರಸಿಂಹಮೂರ್ತಿ ಆರೋಪಿಸಿದ್ದಾರೆ.
ರೈತರು ಸಾಕಿರುವ ರಾಸುಗಳು ಸಹ ಈ ರಸ್ತೆಗೆ ಹೆಜ್ಜೆ ಇಡಲು ಹಿಂಜರಿಯುತ್ತಿವೆ. ಗುಂಡಿ ಬಿದ್ದ ಸಂದರ್ಭದಲ್ಲಿ ಸ್ಥಳೀಯರೇ ಮಣ್ಣು ತುಂಬಿಸಿಕೊಂಡು ರಸ್ತೆ ಸರಿಪಡಿಸಿಕೊಳ್ಳುತ್ತಿದ್ದಾರೆ. ಮಣ್ಣಿನಿಂದ ಕೂಡಿದ ರಸ್ತೆ ಮಳೆಗಾಲದಲ್ಲಿ ಯಾವ ಗದ್ದೆ ಬಯಲಿಗೂ ಸಮವಿಲ್ಲ ಎಂಬಂತೆ ಕೆಸರಿನಮಯವಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ದುರಸ್ಥಿ ಆಗಲಿಲ್ಲ. ಜನಪ್ರತಿನಿಧಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಇತ್ತ ಕಡೆ ಸುಳಿದಿಲ್ಲ ಎಂದು ಗ್ರಾಮಸ್ಥರ ಮಹೇಶ್ ದೂರಿದರು.
ಕಸಬ ಹೋಬಳಿಯ ಈ ಜವರೇಗೌಡನಪಾಳ್ಯ ಸಣ್ಣ ಗ್ರಾಮವಾದರೂ ಜಿ.ಹೊಸಹಳ್ಳಿ ಪಂಚಾಯಿತಿಗೆ ಒಳಪಟ್ಟ ಹೆಸರುಗಳಿಸಿದ ಗ್ರಾಮವಾಗಿದೆ. ಈ ಹಿಂದೆ ಕುಡಿಯುವ ನೀರಿನ ವಿಚಾರದಲ್ಲಿ ಸಾಕಷ್ಟು ತೊಂದರೆ ಆಗಿ ಮತದಾನ ಬಹಿಷ್ಕಾರ ಮಾಡುವ ಹಂತಕ್ಕೆ ಇಡೀ ಗ್ರಾಮಸ್ಥರು ತೀರ್ಮಾನಿಸಿದ್ದರು. ಒಟ್ಟಾರೆ ಮನವಿಗೆ ಬೆಲೆ ಕೊಡದ ಅಧಿಕಾರಿಗಳು ಬಹಿಷ್ಕಾರ ಬೆದರಿಕೆಗೆ ಕೆಲಸ ಮಾಡಿಕೊಟ್ಟಿದ್ದು ಜನರ ಮನದಲ್ಲಿದೆ. ಈ ಬಾರಿ ಅದ್ವಾನಗೊಂಡ ರಸ್ತೆ ದುರಸ್ಥಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಗ್ರಾಮಸ್ಥರು ಯಾವ ನಿರ್ಧಾರ ಕೈಗೊಂಡರೂ ಅಚ್ಚರಿ ಪಡುವಂತಿಲ್ಲ.