ಮಧುಗಿರಿ :
ಗ್ರಾ. ಪಂ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಲಗೇಜ್ ಆಟೋದಲ್ಲಿ ಪೀಟೋಪಕರಣಗಳು ಮತ್ತು ಕಡತಗಳನ್ನು ತುಂಬಿಕೊಂಡು ಹೊರಡುವ ವೇಳೆ ಗ್ರಾಮಸ್ಥರು ತಡೆಯೊಡ್ಡಿದ ಪರಿಣಾಮ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ದಿನ ಪೂರ್ತಿ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಗ್ರಾಮದಲ್ಲಿರುವ ಗ್ರಾ.ಪಂ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಗ್ರಾಮದಲ್ಲೇ ಉಳಿಯಲಿ ಎಂದು ಪ್ರತಿಭಟನಾಕಾರರು ಶಾಸಕ ಎಂ.ವಿ.ವಿರಭದ್ರಯ್ಯನವರಿಗೆ ಮನವಿ ಮಾಡಿದರು. ಆಗ ಶಾಸಕರು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ವಿರೋಧವಾಗಿ ಸ್ಥಳಾಂತರ ಮಾಡುವುದು ಬೇಡ ಎಂದು ಕಚೇರಿಯ ಮುಂಭಾಗ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಒಪ್ಪದ ಆಡಳಿತ ಮಂಡಳಿ ಸದಸ್ಯರು ಜುಲೈ 1 ಕ್ಕೆ ನಮ್ಮ ಅಧಿಕಾರವಧಿ ಕೊನೆಗೊಳ್ಳಲಿದ್ದು, ಕಚೇರಿ ಸ್ಥಳಾಂತರಿಸಿ ಇಲ್ಲಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದಾಗ ಶಾಸಕರು ಕಚೇರಿಯ ಉದ್ಘಾಟನೆಯಾಗಿದ್ದು, ಸೂಕ್ತ ಸಮಯದಲ್ಲಿ ಕಚೇರಿ ಸ್ಥಳಾಂತರವಾಗುತ್ತದೆ ಎಂದು ಹೇಳಿದರೂ ಸಹ ಆಡಳಿತ ಮಂಡಳಿಯವರು ಸ್ಥಳಾಂತರವಾಗಲೇಬೇಕೆಂದು ಒತ್ತಾಯಿಸಿದ ಘಟನೆ ನಡೆಯಿತು.
ಶಾಸಕರು ಪೋಲೀಸರಿಗೆ ಮತ್ತು ತಾ.ಪಂ ಇಓ ರವರಿಗೆ ಮಾರ್ಗದರ್ಶನ ನೀಡಿ ಜನಾಭಿಪ್ರಾಯದಂತೆ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದಂತೆ ಕ್ರಮ ಕೈಗೊಳ್ಳಿ ಎಂದರು.
ಜಿ.ಪಂ ಆದೇಶ :
ಮಹಾತ್ಮಗಾಂಧೀ ನರೇಗಾ ಯೋಜನೆ ಹಾಗೂ 14 ನೇ ಹಣಕಾಸು ಯೋಜನೆಯಡಿ ಒಗ್ಗೂಡಿಸುವಿಕೆ ಕಾರ್ಯಕ್ರಮದಡಿ ಚಿನಕವಜ್ರ ನೂತನ ಗ್ರಾ.ಪಂ ಕಟ್ಟಡ ನಿರ್ಮಿಸಿದ್ದು, ಸದರಿ ಹೊಸ ಕಟ್ಟಡಕ್ಕೆ ಆಡಳಿತ ಕೇಂದ್ರವನ್ನು ವರ್ಗಾಯಿಸಲು ಜೂ. 1 ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ತೀರ್ಮಾನವಾಗಿದ್ದು, ಪ್ರಸ್ತುತ ಚಿನಕ ವಜ್ರ ಗ್ರಾಮಸ್ಥರು ಗ್ರಾಮದ ಮದ್ಯದಲ್ಲಿರುವ ಗ್ರಾ.ಪಂ ಕಟ್ಟಡವು ಸುಸಜ್ಜಿತವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬಾರದು ಎಮದು ಮನವಿ ಮಾಡಿದ್ದು, ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿ ತಾ.ಪಂ ಇಓ ಜೂ. 29 ರಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಬರೆದ ಪತ್ರಕ್ಕೆ ನಿಮ್ಮ ಹಂತದಲ್ಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅದೇಶ ನೀಡಿದ್ದರಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದಿರುವುದೇ ಪ್ರತಿಭಟನೆಗೆ ಕಾರಣವಾಗಿದೆ. ಸಮಸ್ಯೆಯನ್ನು ಬಗೆ ಹರಿಸಬೇಕಾಗಿದ್ದ ಪಿಡಿಓ ಉತ್ತಮ್ ಕಚೇರಿಯ ಕಡೆ ಸುಳಿಯಲೇ ಇಲ್ಲ. ಆದರೆ ಸಿದ್ದಾಪುರ ಪಿಡಿಓ ಗೌಡಪ್ಪ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಯಿತು.
ಸಿಪಿಐ ಸರ್ದಾರ್, ಪಿಎಸ್.ಐ ಗಳಾದ ಕಾಂತರಾಜು, ಪಾಲಾಕ್ಷ ಪ್ರಭು, ಮೀಸಲು ಪಡೆ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.