ತುಮಕೂರು:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ತುಮಕೂರು ನಗರದಲ್ಲಿ ಹಬ್ಬದಂತೆ ಆಚರಿಸಿದರು
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರ ಸಹಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿ ಹುಲಿಕುಂಟೆಮಠ್ ಮತ್ತು ರಾಜೇಶ್ ದೊಡ್ಮನೆ ಅವರು ನಗರದ ಕನ್ನಡ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವಕರು ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನೇರ ಪ್ರಸಾರದಲ್ಲಿ ವೀಕ್ಷಿಸಲು ಎಲ್‍ಇಡಿ ಸ್ಕ್ರೀನ್ ಆಯೋಜನೆ ಮಾಡಿದ್ದರು. ಸುಮಾರು 200ಕ್ಕೂ ಹೆಚ್ಚು ಯುವಕರು ಮತ್ತು ಸೇವಾದಳದ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಇಂದು ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 7,800ಕ್ಕೂ ಹೆಚ್ಚು ಸ್ಥಳಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನ, ಡಿಜಿಟಲ್ ಮತ್ತು ಝೂಮ್ ಸಂವಾದದ ಮೂಲಕ ಜನ ಪಾಲ್ಗೊಂಡಿದ್ದಾರೆ. ತುಮಕೂರು ನಗರವೂ ಸೇರಿದಂತೆ ಜಿಲ್ಲೆಯಲ್ಲೂ ಹೆಚ್ಚು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮ ಪಡುತ್ತಿದ್ದಾರೆ ಎಂದರು.
ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಬೆಂಬಲಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಿಂತಿದ್ದು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಅವರ ಜೊತೆಯಲ್ಲಿದ್ದು, ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷರಾದ ರಾಹುಲ್ ಗಾಂಧಿ, ಕರ್ನಾಟಕ ಉಸ್ತುವಾರಿಗಳಾದ ವೇಣುಗೋಪಾಲ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಈಶ್ವರಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮ್ಮದ್ ಅವರನ್ನು ನೇಮಕ ಮಾಡಿದ್ದು, ಇವರೆಲ್ಲರಿಗೂ ಯುವ ಕಾಂಗ್ರೆಸ್ ಜೊತೆಯಲ್ಲಿದ್ದು, ಪೂರಕವಾಗಿ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ರಾಜೇಶ್ ದೊಡ್ಮನೆ ಮಾತನಾಡಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರ ಸಹಯೋಗದಲ್ಲಿ ಇಂದು ಕನ್ನಡ ಭವನದಲ್ಲಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಎಲ್‍ಇಡಿ ಸ್ಕ್ರೀನ್ ಮೂಲಕ ವೀಕ್ಷಿಸಲು ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ಯುವಕರು ಭಾಗವಹಿಸಿ 7676366666 ಸಂಖ್ಯೆಗೆ ಕರೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡು ಈ ವಿನೂತನ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಲಾಹಿ ಸಿಖಂದರ್ ಮಾತನಾಡಿ, ಇಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ತೆಗೆದುಕೊಂಡಿದ್ದು, ಇವರ ಜೊತೆ ಕಾರ್ಯಾಧ್ಯಕ್ಷರಾಗಿ ಈಶ್ವರಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮ್ಮದ್ ಅವರೂ ಸಹ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಇಂದಿನ ಈ ಪ್ರತಿಜ್ಞಾ ದಿನದ ಉದ್ದೇಶ ಡಿ.ಕೆ. ಶಿವಕುಮಾರ್ ಅವರ ಚಿಂತನೆ ಕೇವಲ ಅವರ ಪ್ರತಿಜ್ಞೆ ಅಲ್ಲ ರಾಜ್ಯದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಜ್ಞೆಯಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರುಗಳ ಜೊತೆಗಿದ್ದೇವೆ ಎಂಬುದನ್ನು ನಾವಿಂದು ಇಲ್ಲಿ ಪ್ರತಿಜ್ಞೆ ಮಾಡುವ ಮೂಲಕ ತೋರಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ರಾಜೇಶ್ ದೊಡ್ಮನೆ, ಮೋಹನ್, ಎಸ್ಟಿ ಘಟಕದ ಅಧ್ಯಕ್ಷ ತು.ಬಿ.ಮಲ್ಲೇಶ್ ದರ್ಶನ್, ರಾಘವೇಂದ್ರ ಸ್ವಾಮಿ, ಶಿವಾಜಿ, ಆಕಾಶ್, ಅನಿಲ್‍ಕುಮಾರ್, ಪರಶುರಾಮ್, ಇ.ಟಿ.ನಾಗರಾಜು, ಮಾದೇವಗೌಡ್ರು, ಸುಶೀಲ್ ಕುಮಾರ್, ಬಿ.ಜಿ.ಲಿಂಗರಾಜು, ಜಿ.ಎಲ್.ಗೌಡ, ಸೇರಿದಂತೆ ಸೇವಾದಳದ ಪದಾಧಿಕಾರಿಗಳು, ಕಿಸಾನ್ ಘಟಕ, ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.