ತುಮಕೂರು:
ಪ್ರಯೋಗಾಲಯಕ್ಕೆ ಕಳುಹಿಸಿದ್ದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಗೊಲ್ಲರಹಟ್ಟಿಯ ಮೇಕೆಗಳ ವರದಿಗಳು ನೆಗೆಟಿವ್ ಬಂದಿದ್ದು, ಕುರಿಗಾಹಿಗಳು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ: ಕೆ.ಜಿ. ನಂದೀಶ್ ಅವರು ತಿಳಿಸಿದ್ದಾರೆ.
ಕುರಿಗಾಹಿಯೊಬ್ಬನಿಗೆ ಕೊರೋನಾ ಸೋಂಕು ಧೃಡಪಟ್ಟಿರುವುದರಿಂದ ಅಕ್ಕ-ಪಕ್ಕದ ಗ್ರಾಮಸ್ಥರಲ್ಲಿ ಆತಂಕವಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಕುರಿಗಾಹಿಗೆ ಸೇರಿದ್ದ 40 ರಿಂದ 45 ಮೇಕೆಗಳಲ್ಲಿ ಹಾಗೂ ಪಕ್ಕದ ರೈತರ ಮೇಕೆಗಳ ಪೈಕಿ 10 ಹೆಚ್ಚು ಮೇಕೆಗಳ ಗಂಟಲು ದ್ರವವನ್ನು ಸಂಗ್ರಹಿಸಿ, ಬೆಂಗಳೂರಿನ I H B ಗೆ 5 ಮಾದರಿ ಹಾಗೂ ಭೂಪಾಲ್ ಲ್ಯಾಬ್‍ಗೆ 5 ಮಾದರಿ ಕಳುಹಿಸಿಕೊಡಲಾಗಿತ್ತು. ಬೆಂಗಳೂರಿನ ಲ್ಯಾಬ್‍ನಿಂದ ವರದಿ ನೆಗೆಟಿವ್ ಎಂದು ಬಂದಿದೆ.
ಪ್ರಪಂಚದಲ್ಲಿ ಇಲ್ಲಿಯವರೆಗೂ ಕೂಡ ಕುರಿ ಮತ್ತು ಮೇಕೆಗಳಿಗೆ ಕೋವಿಡ್-19 ರೋಗ ಕಂಡು ಬಂದಿರುವುದಿಲ್ಲ. ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.